ಧಾರವಾಡದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಇದೀಗ ರಾಜ್ಯ ಬಾರ್ ಕೌನ್ಸಿಲ್‌ನಿಂದ ಹೊರಬಿದ್ದಿದ್ದಾರೆ.
ಈ ಮೂಲಕ ರಾಜ್ಯ ಬಾರ್ ಕೌನ್ಸಿಲ್‌ನಿಂದ ದಿಲ್ಲಿಯ ಕೇಂದ್ರ ಬಾರ್ ಕೌನ್ಸಿಲ್‌ಗೆ ಈ ಹಿಂದೆ ಪ್ರತಿನಿಧಿಯಾಗಿ ನಿಯೋಜಿತರಾಗಿದ್ದ ಹಿರೇಮಠ ಈಗ ಎರಡೂ ಹುದ್ದೆಗಳನ್ನು ಕಳೆದು ಕೊಂಡಿದ್ದಾರೆ. ಕೌನ್ಸಿಲ್ ನೀಡಿದ ಸಲಹೆ ಮೇರೆಗೆ ಹಿರೇಮಠ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಕೆಲವು ಮೂಲಗಳ ಪ್ರಕಾರ, ರಾಜ್ಯ ಬಾರ್ ಕೌನ್ಸಿಲ್ ಸಭೆಯಲ್ಲಿ ಸದಸ್ಯರ ತೀವ್ರ ಆಕ್ರೋಶಕ್ಕೆ ಕಾರಣರಾದ ಹಿರೇಮಠ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯನ್ನು ಕೌನ್ಸಿಲ್ ಅಂಗೀರಿಸಿದೆ.
ಕಳೆದ ಜುಲೈ 4ರಂದು ಧಾರವಾಡದಲ್ಲಿ ನಡೆದ ಸಂಚಾರಿ ಪೀಠ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರೇಮಠ ಅವರು ಬಾರ್ ಕೌನ್ಸಿಲ್ ಸದಸ್ಯರಿಗೆ ಸೂಕ್ತ ಗೌರವವನ್ನು ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕುಪಿತಗೊಂಡಿರುವ ಕೌನ್ಸಿಲ್ ಸದಸ್ಯರು ಹಿರೇಮಠ ಅವರ ಕಾರ್ಯಪ್ರವೃತ್ತಿ ಬಗ್ಗೆ ಅಸಹನೆ ತೋರಿದ್ದಲ್ಲದೆ ಸಾರ್ವಜನಿಕ ಹೋರಾಟವನ್ನು ಇವರು ವ್ಯಕ್ತಿಗತ ಹೋರಾಟ ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದು, ರಾಜೀನಾಮೆಗೆ ಆಗ್ರಹ ಮಾಡಿದ್ದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿಯೇ ಹಿರೇಮಠ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರೇಮಠ, ನಾನು ಮಾಡಿರುವ ಕೆಲಸಗಳ ಬಗ್ಗೆ ಉತ್ತರ ಕರ್ನಾಟಕದ ಜನತೆ ತಿಳಿದಿದೆ. ಆದರೆ ಬಾರ್ ಕೌನ್ಸಿಲ್‌ಗೆ ನೀಡಿರುವ ರಾಜೀನಾಮೆ ಕುರಿತು ದಾಖಲೆಗಳೊಂದಿಗೆ ಶೀಘ್ರದಲ್ಲಿ ವಿವರಣೆ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.
|