ವಿಶ್ವ ವಿಖ್ಯಾತ ದಸರಾ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವ ಸಂದರ್ಭದಲ್ಲಿ ಈಗ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಯುವ ದಸರಾ ಕ್ರೀಡಾ ಉದ್ಘಾಟನೆಗೆ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗಳಿಸಿದ ಅಭಿನವ್ ಬಿಂದ್ರಾ ಅವರನ್ನು ಕರೆಸಲು ತೀರ್ಮಾನಿಸಿರುವುದಾಗಿ ದಸರಾ ಉದ್ಘಾಟನಾ ಸಮಿತಿಯ ಮೂಲಗಳು ತಿಳಿಸಿವೆ.
ಈ ಬಗ್ಗೆ ವಿವರಣೆ ನೀಡಿರುವ ಗ್ರಾಮೀಣಾಭಿವೃದ್ದಿ ಖಾತೆ ಸಚಿವೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ, ಭಾರತದ ಕೀರ್ತಿ ಪತಾಕೆ ಹಾರಿಸಿದ ಅಭಿನವ್ ಬಿಂದ್ರಾ ಅವರನ್ನು ಕರೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕುಸ್ತಿ ಉದ್ಘಾಟನೆಗೆ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದ ಸುಶೀಲ್ ಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದು ಅವರು ಸ್ಪಷ್ಟ ಪಡಿಸಿದರು.
ಈ ಹಿನ್ನೆಲೆಯಲ್ಲಿ ಗುರುವಾರ ದಸರಾ ಕುರಿತಂತೆ ಮೈಸೂರು ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದರು.
ಈ ಬೆಳವಣಿಗೆಯಿಂದ ಮೈಸೂರು ದಸರಾಗೆ ಈಗ ಮತ್ತಷ್ಟು ಕಳೆ ಬಂದಿದೆ. ಈ ಮೊದಲು ರಾಜ್ಯ ಸರ್ಕಾರ ಚಿನ್ನದ ಹುಡುಗ ಅಭಿನವ್ ಬಿಂದ್ರಾಗೆ 10 ಲಕ್ಷ ರೂ. ಘೋಷಿಸಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ.
|