ದೇಶದ ಗ್ರಾಮೀಣ ಪ್ರದೇಶಗಳ ಸಮಸ್ಯೆ ಹೇಳತೀರದು. ಇದರಲ್ಲಿ ಪ್ರಮುಖ ಸಮಸ್ಯೆ ಶೌಚಾಲಯದ್ದು. ಸದಾ ವಿಶಿಷ್ಟ ರೀತಿಯ ಪ್ರತಿಭಟನೆಗಳಿಗೆ ಹೆಸರಾಗಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಈಗ ಇದೇ ವಿಷಯವನ್ನು ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರಿಗೆ ಈ ಸಮಸ್ಯೆಯ ಬಿಸಿ ಮುಟ್ಟಿಸಲು ಹೊಸದೊಂದು ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜಭವನದ ಮುಂದೆ ಸಾಮೂಹಿಕ ಮೂತ್ರ ವಿಸರ್ಜನೆ ಮಾಡಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸುವುದು!ಪ್ರತಿಭಟನೆಯ ರೂಪುರೇಷೆ ಸಿದ್ಧಪಡಿಸಲು ಸಭೆ ನಡೆಸಿದ ವಾಟಾಳ್, ನಂತರ ಮಾತನಾಡಿ, ಜನವರಿ ಒಂದರ ಒಳಗಾಗಿ ಬೆಂಗಳೂರಿನಲ್ಲಿ ಸಾವಿರ ಶೌಚಾಲಯ ನಿರ್ಮಿಸಬೇಕು. ಅಂತೆಯೇ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಮಹಿಳೆಯರ ಶೌಚ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಅಗತ್ಯ ವ್ಯವಸ್ಥೆ ಮಾಡಬೇಕಾಗಿದೆ ಆದ್ದರಿಂದ ಈ ವಿನೂತನ ಪ್ರತಿಭಟನೆ ಯೋಜನೆ ರೂಪಿಸಿದ್ದು, ಆಗ್ರಹಕ್ಕೆ ಸರ್ಕಾರ ಮಣಿಯದಿದ್ದರೆ ಜನವರಿ 15ರಂದು ರಾಜಭವನದ ಎದುರು ಸಾಮೂಹಿಕ ಮೂತ್ರ ವಿಸರ್ಜನಾ ಪ್ರತಿಭಟನೆ ನಡೆಸಲಾಗುವುದು! ಎಂದು ಬೆದರಿಕೆ ಹಾಕಿದರು.ವಾಟಾಳ್ ಅವರನ್ನು ಕತ್ತೆ, ಕೋಣ, ಚಾಪೆ ಮೇಲೆ ನೋಡಿದ್ದ ಜನ, ಪತ್ರಕರ್ತರು ಹೊಸ ಅವತಾರ ನೋಡಲು ರಾಜಭವನ ಆಡಳಿತ ಅವಕಾಶ ಮಾಡಿಕೊಡುವುದೇ ಕಾದು ನೋಡಬೇಕಾಗಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಸಮಸ್ಯೆಯನ್ನು ಎಸಿ ರೂಮಿನಲ್ಲಿ ಕುಳಿತುಕೊಳ್ಳುವ ಅಧಿಕಾರ ಶಾಹಿಗಳಿಗೆ ಮುಟ್ಟಿಸುವುದು ಇಂದಿನ ಅಗತ್ಯ. ಆದ್ದರಿಂದ ವಾಟಾಳ್ ನಡೆಸುತ್ತಿರುವ ಈ ಪ್ರತಿಭಟನೆಗೆ ತಮ್ಮ ಬೆಂಬಲವಿದೆ ಎಂದರು. ಸಭೆಯಲ್ಲಿ ಎಚ್.ಎಸ್. ದೊರೆಸ್ವಾಮಿ, ಬಿ.ಟಿ.ಲಲಿತಾನಾಯಕ್ ಮುಂತಾದ ಮಖಂಡರು ಪಾಲ್ಗೊಂಡಿದ್ದರು. ಗ್ರಾಮೀಣ ಶೌಚಾಲಯ ಸಮಸ್ಯೆ ನಿವಾರಣೆಗೆ ಹೋರಾಟ ನಡೆಸಲು ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್‌ನಲ್ಲಿ ಸಭೆ ನಡೆಸಿದ್ದು ವಾಟಾಳ್ ಅವರ ಹೋರಾಟದ 'ತೀವ್ರತೆ'ಯನ್ನು ಸೂಚಿಸುವಂತಿತ್ತು. |