ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆರೋಪಿಸಿದೆ.
ಬಿಜೆಪಿ ನೇತೃತ್ವದ ಸರ್ಕಾರ ಆಸ್ತಿತ್ವಕ್ಕೆ ಬಂದು ಐದಾರು ತಿಂಗಳಾದರೂ ಕೃಷಿಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಸುರೇಶ್‌ಬಾಬು ಪಾಟೀಲ ದೂರಿದರು. ಮುಖ್ಯಮಂತ್ರಿಯವರಿಗೆ ರೈತರ ಬಗ್ಗೆ ನೈಜ ಕಾಳಜಿಯಿದ್ದರೆ ರಾಜ್ಯದಲ್ಲಿ ಕೃಷಿ ಉದ್ಯೋಗ ಸೃಷ್ಟಿಸುವುದರ ಮೂಲಕ ಗ್ರಾಮಗಳನ್ನು ಕ್ರಿಯಾಶೀಲ ಮಾಡುವ ಆರ್ಥಿಕ ನೀತಿ ರೂಪಿಸಬೇಕೆಂದರು.
ರಸಗೊಬ್ಬರ ಸಮಸ್ಯೆ ನಿವಾರಣೆಗೆ ಸಾವಯವ ಕೃಷಿ ಪದ್ಧತಿ ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ. ಆದರೆ ಆ ವಿಧಾನ ರೈತರಿಗೆ ಹೊರೆಯಾಗುವುದರಿಂದ ಸಹಾಯಧನ ನೀಡಬೇಕು ಎಂದೂ ಆಗ್ರಹಿಸಿದರು.
ವಿಶೇಷ ಕೈಗಾರಿಕಾ ವಲಯದಂತೆ ವಿಶೇಷ ಕೃಷಿ ವಲಯ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು. ಕೈಗಾರಿಕಾ ವಲಯ ಸ್ಥಾಪನೆಗೆ ಕೃಷಿ ಭೂಮಿ ಬಿಟ್ಟು ಬಂಜರು ಭೂಮಿ ಬಳಕೆ ಮಾಡಬೇಕು ಎಂದರು. |