ಬೆಂಗಳೂರು: ಮುಂಬೈಯಲ್ಲಿ ಉಗ್ರರು ನಡೆಸಿದ ಕೃತ್ಯ ಅತ್ಯಂತ ಹೇಯವಾಗಿದ್ದು, ಎಲ್ಲ ರಾಜ್ಯಗಳ ರಾಜಧಾನಿಗಳಲ್ಲೂ ಕಟ್ಟೆಚ್ಚರ ವಹಿಸುವ ಮೂಲಕ ಆತಂಕಕಾರಿ ಶಕ್ತಿಗಳನ್ನು ಮಟ್ಟಹಾಕಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದನ್ನು ಬಿಟ್ಟು ಇಡೀ ರಾಷ್ಟ್ರ ಏಕತೆಯನ್ನು ಪ್ರದರ್ಶಿಸಬೇಕು. ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಬೇಕು ಎಂದರು.
ರಾಜಕೀಯ ಪಕ್ಷಗಳ ನೀತಿ, ಸಿದ್ದಾಂತಗಳು ಏನೇ ಇರಲಿ. ಈಗ ಏಕತೆಯನ್ನು ಪ್ರದರ್ಶಿಸಿ ಇಂತಹ ಘಟನೆಗಳಿಗೆ ತಿಲಾಂಜಲಿ ನೀಡುವ ಪ್ರಯತ್ನ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಒತ್ತಾಯಿಸಿದ್ದಾರೆ. ಯುದ್ಧದಲ್ಲಿ ಮಡಿದವರಿಗೆ ನೀಡುವ ಪ್ರಶಸ್ತಿ ಗೌರವಗಳನ್ನು ಮುಂಬೈಯಲ್ಲಿ ದಾಳಿಯಲ್ಲಿ ಮಡಿದ ಯೋಧರಿಗೆ ಹಾಗೂ ಅಧಿಕಾರಿಗಳಿಗೆ ನೀಡಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. |