ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದಾಗಿ ವಿಧಾನಸೌಧ ಇದೀಗ ರಾಜಕೀಯ ದಳ್ಳಾಳಿಗಳ ತಾಣವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸೌಧ ರಾಜಕೀಯ ದಳ್ಳಾಳಿಗಳ ತಾಣವಾಗುತ್ತಿರುವುದರಿಂದ ವರ್ಗಾವಣೆಗಾಗಿ ಹೊಸ ಕಾರ್ಖಾನೆ ಸ್ಥಾಪನೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
51 ವರ್ಷಗಳ ರಾಜಕೀಯ ಅನುಭವ ಹೊಂದಿದ್ದರೂ ನನ್ನ ಕ್ಷೇತ್ರವನ್ನು ಡಿ.ಸಿ. ತಮ್ಮಣ್ಣ ಅವರಿಗೆ ನೀಡಿ ತಪ್ಪು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪಕ್ಷದ ನೆರಳಿನಲ್ಲಿ ಬೆಳೆದು ತಮ್ಮ ವರ್ಚಸ್ಸನ್ನು ಬೆಳೆಸಿಕೊಂಡು ತಮ್ಮಣ್ಣ ಪಕ್ಷಕ್ಕೆ ದ್ರೋಹವೆಸಗಿದ್ದಾರೆ ಎಂದು ಹೇಳಿದರು.
ನಾನೆಂದೂ ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ಮಹಾರಾಷ್ಟ್ರ ರಾಜ್ಯಪಾಲ ಆಗುತ್ತೇನೆ ಎಂದು ಕೂಡ ತಿಳಿದಿರಲಿಲ್ಲ. ನಾನು ಹೊರ ದೇಶದಲ್ಲಿದ್ದಾಗ ರಾಜ್ಯಪಾಲನಾದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. |