ಸಹಕಾರಿ ಸಂಘಗಳಿಗೆ ಹಾಲು ಪೂರೈಸುತ್ತಿರುವ ರೈತರಿಗೆ ಮಾತ್ರವೇ ಪ್ರೋತ್ಸಾಹ ಧನ ನೀಡುತ್ತಿರುವ ಸರಕಾರದ ನಿರ್ಧಾರವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಿ.5ರಂದು ನಗರದ ಗಾಂಧಿ ಪ್ರತಿಮೆ ಎದುರು ಹಾಲು ಉತ್ಪಾದಕ ರೈತರ ಬೃಹತ್ ರಾಲಿ ಹಮ್ಮಿಕೊಂಡಿದೆ.
ರಾಲಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಹಾಲು ಉತ್ಪಾದಿಸುವ 10 ಸಾವಿರ ರೈತರು ಭಾಗವಹಿಸಲಿದ್ದು, ಮಲ್ಲೇಶ್ವರ ಆಟದ ಮೈದಾನದಿಂದ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಹಾಲು ಉತ್ಪಾದಿಸುವ ರೈತರಿಗೆ ಪ್ರತಿ ಲೀ.2 ರೂ. ಪ್ರೋತ್ಸಾಹಧನ ನೀಡುವ ಸರಕಾರದ ಉದ್ದೇಶ ಸ್ವಾಗತಾರ್ಹ. ಆದರೆ ಈ ನೀತಿ ಕೆಲವೇ ರೈತರ ಪರವಾಗಿದ್ದು, ಉಳಿದ ರೈತರನ್ನು ನಿರ್ಲಕ್ಷಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು. ಈ ಪ್ರೋತ್ಸಾಹ ಧನ ರಾಜ್ಯದ ಕೆಲವೇ ಜಿಲ್ಲೆಗಳ ರೈತರ ಕೈ ಸೇರಿದೆ. ರಾಜ್ಯದಲ್ಲಿ ಪ್ರತಿ ದಿನ 113 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದ್ದು, ಇದರಲ್ಲಿ ಕೇವಲ 30 ಲಕ್ಷ ಲೀ.ಹಾಲು ಮಾತ್ರ ಪ್ರತಿ ದಿನ ಸಹಕಾರಿ ಸಂಘಗಳ ಮೂಲಕ ಶೇಖರಣೆ ಆಗುತ್ತಿದೆ ಎಂದರು.
ಕೇವಲ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸೇರಿದ ಹಸು ಮತ್ತು ಕೆಎಂಎಫ್ ಸಂಸ್ಥೆಗಳನ್ನು ಪೋಷಿಸುವಂತಹ ಹಾಲಿನ ರಾಜಕೀಯ ಬೇಡ. ಸರಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. |