ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪೋಲಿಯೋ ಆವಾಂತರಕ್ಕೆ ಕಂಪನಿಗಳ ಲಾಬಿ ಕಾರಣ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೋಲಿಯೋ ಆವಾಂತರಕ್ಕೆ ಕಂಪನಿಗಳ ಲಾಬಿ ಕಾರಣ?
ಪೋಲಿಯೋ ಹನಿ ಹಾಕಿಸಿಕೊಂಡ ಮಕ್ಕಳು ಅಸ್ವಸ್ಥರಾಗುತ್ತಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಲು ಪೋಲಿಯೋ ಇಂಜೆಕ್ಷನ್ ಲಾಬಿ ಕಾರಣವೇ? ಹೌದೆನ್ನುತ್ತವೆ ಕೆಲವು ಮೂಲಗಳು.

ಈ ಮಾತುಗಳು ಜನಸಾಮಾನ್ಯರು ಮತ್ತು ವೈದ್ಯಕೀಯ ರಂಗದಲ್ಲಿ ಕೇಳಿಬರುತ್ತಿವೆ. ಪೋಲಿಯೋ ಹನಿ ಕಾರ್ಯಕ್ರಮ 13 ವರ್ಷದಿಂದ ಚಾಲ್ತಿಯಲ್ಲಿದೆ. ಇದುವರೆಗೆ ಹನಿ ಹಾಕಿಸಿದ್ದರಿಂದ ಯಾವುದೇ ಸಾವಾಗಿಲ್ಲ. ಅಡ್ಡ ಪರಿಣಾಮವೂ ಅತಿ ಕಡಿಮೆ ಸಮಯದ್ದು. ಯಾವುದೇ ಔಷಧ ತೆಗೆದುಕೊಂಡರೂ ಅಡ್ಡ ಪರಿಣಾಮ ಆಗುವುದು ಸಾಮಾನ್ಯ. ಪೋಲಿಯೋ ಹನಿ ಹಾಕಿಸಿದಾಗ ಒಂದೆರಡು ನಿಮಿಷ ಹೊಟ್ಟೆನೋವಾಗಿ ಮಗು ಅಳುವುದು ಸಹಜವಾದರೂ ಸಾವು ಸಂಭವಿಸಿರುವ ಉದಾಹರಣೆಯೇ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ಆದರೆ, ಪೊಲಿಯೋ ಇಂಜೆಕ್ಷನ್ ನೋವು ತರುವ ವಿಧಾನವಾಗಿದ್ದು, ದುಬಾರಿಯೂ ಹೌದು. ಇದು ಪೋಲಿಯೋ ಔಷಧ ಹನಿಗಿಂತ ನೋವುಕಾರಕ ಮತ್ತು ದುಬಾರಿ. ಈ ಕಂಪನಿಗಳು ದುಬಾರಿ ಔಷಧಿ ಮಾರಾಟದ ಲಾಭಕ್ಕಾಗಿ ಇಂತಹ ಪುಕಾರು ಹುಟ್ಟುಹಾಕಿರಬಹುದೆಂದು ಕೆಲವು ವೈದ್ಯರು ಅನುಮಾನಪಟ್ಟಿದ್ದಾರೆ.

ಪೋಷಕರ ಆತಂಕ:
ಕೆಲ ಖಾಸಗಿ ಆಸ್ಪತ್ರೆಗಳು ಇದೇ ಸಮಯವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡವು. ಮಗುವನ್ನು ತಪಾಸಣೆಗೊಳಪಡಿಸಲು ತಲಾ 50 ರಿಂದ 500 ರೂ.ಗಳವರೆಗೆ ಶುಲ್ಕ ಪಡೆಯುತ್ತಿದ್ದುದು ಸಾಮಾನ್ಯವಾಗಿತ್ತು.

ವದಂತಿಗೆ ಕಿವಿಗೊಡಬೇಡಿ:
ಪೋಲಿಯೋ ಹನಿ ಹಾಕಿಸಿದ್ದರಿಂದ ಮಕ್ಕಳು ಅಸ್ವಸ್ಥವಾಗಿವೆ ಎಂಬ ವದಂತಿಗಳು ಸುಳ್ಳು. ಇದುವರೆಗೂ ಯಾವುದೇ ಮಗು ಅಸ್ವಸ್ಥವಾಗಿರುವ ಪ್ರಕರಣ ದಾಖಲಾಗಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ದೊಡ್ಡಬಳ್ಳಾಪುರದಲ್ಲಿ ಚುನಾವಣಾ ಪ್ರಚಾರದ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

PTI
ಆಸ್ಪತ್ರೆ ಮುಂದೆ ಜಮಾಯಿಸಿದ ಆತಂಕಿತ ಜನತ

ವದಂತಿಗಳ ಹಿನ್ನೆಲೆ
ಪೋಲಿಯೋ ಹನಿಹಾಕಿದ ಮಕ್ಕಳು ಅಸ್ವಸ್ಥಗೊಳ್ಳುತ್ತಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ತಮ್ಮ ಮಕ್ಕಳಿಗೆ ಔಷಧಿ ಹಾಕಿಸಿದ ಹೆತ್ತವರು ಕಂಗಾಲಾದರು. ಪೋಲಿಯೋ ಹನಿ ಹಾಕಿಸಿದ್ದರಿಂದ ಮಕ್ಕಳು ಸಾವನ್ನಪ್ಪುತ್ತಿವೆ ಎಂದು ಕೆಲವು ಟೀವಿ ವಾಹಿನಿಗಳು ಬ್ರೇಕಿಂಗ್ ನ್ಯೂಸ್ ಬಿತ್ತರ ಮಾಡಿದ್ದರಿಂದ ಮತ್ತಷ್ಟು ಆತಂಕಕ್ಕೆ ಒಳಗಾದ ಪೋಷಕರು ಮಲಗಿದ್ದ ಮಕ್ಕಳನ್ನು ಎಬ್ಬಿಸಿ ರಾತ್ರೋರಾತ್ರಿ ಆಸ್ಪತ್ರೆಗಳಿಗೆ ದಾಂಗುಡಿಯಿಟ್ಟರು.

ಇದಲ್ಲದೆ, ಇದನ್ನೇ ಜನತೆಗೆ ಗಾಬರಿ ಹುಟ್ಟಿಸುವ ಅಸ್ತ್ರವನ್ನಾಗಿಸಲು ಕಿಡಿಗೇಡಿಗಳು ಮುಂದಾದರು. ಪ್ರಾರ್ಥನಾ ಮಂದಿರಗಳಲ್ಲಿ ಮೈಕ್ ಮೂಲಕ ಪೋಲಿಯೋ ಲಸಿಕೆಯಿಂದ ಮಕ್ಕಳು ಅಸ್ವಸ್ಥರಾಗುತ್ತಿದ್ದಾರೆಂಬ ಸುಳ್ಳುಸುದ್ದಿ ಬಿತ್ತರಿಸಲಾಗಿತ್ತು.

ಜನಜಂಗುಳಿಯಿಂದ ತುಂಬಿದ ಬೆಂಗಳೂರಿನ ಜೈನ್ ಆಸ್ಪತ್ರೆ, ಶಿಫಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಮಲ್ಲಿಗೆ ಆಸ್ಪತ್ರೆಗಳಲ್ಲಿ ಜನಜಂಗುಳಿ ನಿಯಂತ್ರಿಸಲು ಕಷ್ಟಪಡಬೇಕಾಯಿತು. ಮಧ್ಯರಾತ್ರಿಯಲ್ಲೂ ಟ್ಯಾನರಿ ರಸ್ತೆ, ಹೊಸೂರು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಆತಂಕ ಸೃಷ್ಟಿಯಾಗಿದೆ.

ಲಸಿಕೆಯಿಂದ ಏನೂ ಆಗದು
ಪೋಲಿಯೋ ಲಸಿಕೆಯಿಂದ ಮಕ್ಕಳು ಅಸ್ವಸ್ಥರಾಗುವುದಾದರೆ ಐದು ನಿಮಿಷದೊಳಗೆ ಹಾಗಾಗಬೇಕು. ಬದಲಿಗೆ ಲಸಿಕೆ ಹಾಕಿ ಗಂಟೆಗಳ ನಂತರ ವಾಂತಿ, ಭೇದಿ, ತಲೆಸುತ್ತುವಿಕೆ, ಜ್ವರ ಅಥವಾ ಇನ್ಯಾವುದೇ ಸಮಸ್ಯೆ ಕಂಡು ಬಂದರೆ ಅದಕ್ಕೆ ಲಸಿಕೆ ಕಾರಣವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮರಳಿ 'ಕೈ' ಹಿಡಿಯುವತ್ತ ಬಂಗಾರಪ್ಪ ಚಿತ್ತ
ಪೋಲಿಯೋ ಲಸಿಕೆ ಸುರಕ್ಷಿತ: ಸಚಿವ ಶ್ರೀರಾಮುಲು
ಮದ್ದೂರಿನಲ್ಲಿ 5 ಸಾವಿರಕ್ಕೂ ಹೆಚ್ಚು ಸೀರೆ ವಶ
ಪೊಲೀಸ್ ಜೀಪುಗಳಲ್ಲೇ ಹಣ ಸಾಗಣೆ: ಕುಮಾರ್
ಅಕ್ರಮದಲ್ಲಿ ವೀಕ್ಷಕರೂ ಶಾಮೀಲು: ಡಿಕೆಶಿ
ಆರ್ಥಿಕ ಬಿಕ್ಕಟ್ಟು ಗುರುತಿಸುವಲ್ಲಿ ವಿಫಲ: ಯು.ಆರ್.ರಾವ್