ಕೋಮುಗಲಭೆಯಿಂದ ತತ್ತರಿಸಿಹೋಗಿರುವ ಉದಯಗಿರಿ, ಕ್ಯಾತಮಾರನಹಳ್ಳಿ ಪ್ರದೇಶ ಸಹಜಸ್ಥಿತಿಗೆ ಮರಳುತ್ತಿದ್ದು, ಶುಕ್ರವಾರ ಸಂಜೆ ಬಿಜೆಪಿ ಪದಾಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆದಿದ್ದನ್ನು ಖಂಡಿಸಿ ಹಿಂದೂಜಾಗರಣ ವೇದಿಕೆ ಶನಿವಾರ ಬಂದ್‌ಗೆ ಕರೆ ನೀಡಿದೆ.
ಬಂದ್ ಕರೆಗೆ ಬೆಳಿಗ್ಗಿನಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ-ಮುಂಗಟ್ಟುಗಳು ಬಂದ್ ಮಾಡಿವೆ. ಮುನ್ನೆಚ್ಚರಿಕೆ ಅಂಗವಾಗಿ ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಮಂಡಿ ಮೊಹಲ್ಲಾದ ನಿವಾಸಿ ಬಿಜೆಪಿ ಯವ ಮೋರ್ಚಾ ಅಧ್ಯಕ್ಷ ವಿ.ಗಿರಿಧರ್ ಅವರನ್ನು ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದೇ ರಸ್ತೆಯ ವಾಜಿದ್‌ಗೂ ಗಾಯಗಳಾಗಿದ್ದು ಆತ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮೇಲ್ನೋಟಕ್ಕೆ ಪರಿಸ್ಥಿತಿ ಶಾಂತವಾಗಿದ್ದರೂ ಈಗಲೂ ಆಂತರಿಕ ಬೇಗುದಿ ಅಲ್ಲಲ್ಲಿ ಕಂಡು ಬರುತ್ತಿದೆ. ಉದಯಗಿರಿ ಮತ್ತು ಸುತ್ತಮುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್‌ಆರ್‌ಪಿ, ಕ್ಷಿಪ್ರ ಕಾರ್ಯಪಡೆ ಹಾಗೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬೆಂಗಳೂರಿನಿಂದ ಆಗಮಿಸಿರುವ ಹಿರಿಯ ಅಧಿಕಾರಿಗಳು ಮೈಸೂರಿನಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ. |