ರಾಷ್ಟ್ರದ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ನುರಿತ ರಾಜಕಾರಣಿ ಹರದನ ಹಳ್ಳಿಯ ದೊಡ್ಡೇಗೌಡ ದೇವೇಗೌಡರ ಜೀವನ ಚರಿತ್ರೆ ಸಿದ್ಧವಾಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರು ತನ್ನ ಜೀವನದ ಸಮಗ್ರ ಆಗುಹೋಗುಗಳನ್ನೊಳಗೊಂಡ ಜೀವನ ಚರಿತ್ರೆಯು ಐದು ಸಂಪುಟಗಳಲ್ಲಿ ಹೊರಬರಲಿದೆ ಎಂದು ತಿಳಿಸಿದ್ದಾರೆ.
PTI
ಕಳೆದ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರೋ.ರಾಧಕೃಷ್ಣ ಅವರು ಗೌಡರ ಜೀವನದ ಚರಿತ್ರೆಯನ್ನು ಅಕ್ಷರಕ್ಕಿಳಿಸುತ್ತಿದ್ದಾರೆ. ಯಾವ ರೀತಿಯಲ್ಲಿ ಸಂಪುಟಗಳನ್ನು ಹೊರತರುತ್ತಾರೆ ಎಂಬುದು ಅವರಿಗೇ ಬಿಟ್ಟ ವಿಚಾರ ಎಂದು ಗೌಡರು ಹೇಳಿದ್ದಾರೆ. ಗೌಡರ ಜಾತ್ಯತೀತ ಸಿದ್ಧಾಂತದಿಂದ ಆಕರ್ಷಿತರಾಗಿದ್ದ ಅವರು ಜೆಡಿಎಸ್ ಸೇರಿದ್ದರು.
ಗೌಡರ ಬಾಲ್ಯ, ಹುಟ್ಟೂರು, ವಿದ್ಯಾಭ್ಯಾಸ, ರಾಜಕೀಯ ಪ್ರವೇಶ, ಮೊದಲಬಾರಿ ಶಾಸಕರಾದದ್ದು, ವಿಪಕ್ಷ ನಾಯಕರಾಗಿದ್ದು, ಬಳಿಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಗದ್ದುಗೆಗೆ ಏರಿದ್ದು ಸೇರಿದಂತೆ ಅವರ ಜೀವನದ ಸಮಗ್ರ ವಿಚಾರಗಳು ಇದರಲ್ಲಿ ದಾಖಲಾಗಲಿವೆ. ಕಾಂಗ್ರೆಸ್ ಪಕ್ಷದ ಮೂಲಕ 1953ರಲ್ಲಿ ರಾಜಕೀಯ ಸೇರಿದ್ದ ಗೌಡರು ಪಕ್ಷೇತರರಾಗಿಯೂ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದಾದ ಬಳಿಕ ಜನತಾ ಪಕ್ಷ, ಬಳಿಕ ದಳ... ಹೀಗೇ ಸಾಗಿದೆ ಅವರು ರಾಜಕೀಯ ಜೀವನ.
ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರು ಈ ವಿಚಾರ ಹೊರಗೆಡಹಿದ್ದಾರೆ. ದೇವೇಗೌಡರು ಈ ರಾಷ್ಟ್ರಕಂಡ ಅತ್ಯಂತ ಪರಿಣತ, ನುರಿತ, ಅನುಭವಿ ರಾಜಕಾರಣಿ. ವಿರೋಧಿಗಳನ್ನು ಹಣಿಯುವುದರಲ್ಲಿ, ತಂತ್ರಗಳನ್ನು ಹೂಡುವುದರಲ್ಲಿ ಅತ್ಯಂತ ಚಾಣಾಕ್ಷರಾಗಿರುವ ಇವರು ಬಡಪೆಟ್ಟಿಗೆ ಸೋಲೊಪ್ಪುವ ರಾಜಕಾರಣಿ ಅಲ್ಲ.
1933ರ ಮೇ 18ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದ ಗೌಡರು ತಮ್ಮ ಜೀವನದಲ್ಲಿ ಹಲವಾರು ಅನಿರೀಕ್ಷಿತ ಏಳುಬೀಳುಗಳನ್ನು ಕಂಡಿದ್ದಾರೆ.