ರಾಜ್ಯ ಬಿಜೆಪಿ ಸರ್ಕಾರ ಶೀಘ್ರವೇ ಪತನಗೊಳ್ಳಲಿದ್ದು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ನಂಜನಗೂಡು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಜನತೆ ನೆರೆಯಿಂದ ತತ್ತರಿಸಿದ್ದಾರೆ. ಅವರನ್ನು ನೋಡದೆ ಅಧಿಕಾರಕ್ಕಾಗಿ ಬಿಜೆಪಿಯವರು ಕಚ್ಚಾಡುತ್ತಿದ್ದಾರೆ. ಈ ಹಿಂದೆ ದೇವೇಗೌಡ-ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಜಗಳವಾಡಿದಾಗಲೆಲ್ಲಾ ಸರ್ಕಾರ ಬಿದ್ದು ಹೋದ ಉದಾಹರಣೆ ಇದೆ. ಅದೇ ರೀತಿ ಈ ಸರ್ಕಾರವೂ ಸಹ ಬಿದ್ದು ಹೋಗುತ್ತದೆ. ಆಪರೇಶನ್ ಕಮಲ ಅವರಿಗೇ ತಿರುಗುಬಾಣವಾಗಿದೆ ಎಂದು ವ್ಯಂಗ್ಯವಾಡಿದರು.
ನಾನು ಹಣಕಾಸು ಮಂತ್ರಿಯಾಗಿದ್ದಾಗ 450ಕೋಟಿ ರೂಪಾಯಿ ಹಣ ಉಳಿಸಿ ಇಟ್ಟಿದ್ದೆ. ಇವರು ಪ್ರತಿವರ್ಷ 10ಸಾವಿರ ಕೋಟಿ ರೂ.ಸಾಲ ಮಾಡುತ್ತಿದ್ದಾರೆ. ಇತ್ತೀಚೆಗೆ ಅಧಿಕಾರಕ್ಕೆ ಬಂದ ರೆಡ್ಡಿಗಳ ಆಸ್ತಿ 30ಸಾವಿರ ಕೋಟಿ ರೂಪಾಯಿ. ರೆಡ್ಡಿಗಳು ಹೋದ ಚುನಾವಣೆಯಲ್ಲಿ 300ಕೋಟಿ ಖರ್ಚು ಮಾಡಿ, ಈಗ 3ಸಾವಿರ ಕೋಟಿ ರೂ.ಮಾಡಿಕೊಳ್ಳಲು ಹೋದರು. ಇದಕ್ಕೆ ಯಡಿಯೂರಪ್ಪ ಕಡಿವಾಣ ಹಾಕಿದ್ದಾರೆ. ಇದಕ್ಕೆ ಸರ್ಕಾರವೇ ಅಲುಗಾಡುತ್ತಿದೆ. ಮುಂದೆ ಬಿದ್ದು ಹೋಗುತ್ತದೆ ಎಂದರು.