ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಮನೆ-ಮಠ ಕಳೆದುಕೊಂಡು ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಶಾಸಕರು ರೆಸಾರ್ಟ್‌ಗಳಲ್ಲಿ ಮೋಜು-ಮಸ್ತಿಗಳಲ್ಲಿ ತೊಡಗಿದ್ದಾರೆ. ಅಂತಹವರನ್ನು ಕ್ಷೇತ್ರದ ಜನರೇ ಪತ್ತೆ ಹಚ್ಚಿ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಿನ್ನಮತದಲ್ಲಿ ತೊಡಗಿರುವ ಶಾಸಕರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಬಿಜಾಪುರ ಜಿಲ್ಲೆಯ ಕೋಟ್ಯಾಳ ಗ್ರಾಮದಲ್ಲಿ ನವಗ್ರಾಮ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಯಾವುದಕ್ಕೂ ಹೆದರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಮೋಜಿನಲ್ಲಿ ತೊಡಗಿರುವ ಜನಪ್ರತಿನಿಧಿಗಳಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದರು.
ರೆಡ್ಡಿ ಸಹೋದರರ ಬಂಡಾಯದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಐ ಡೋಂಟ್ ಕೇರ್ ನನಗೆ ಜನರ ಹಿತಾಸಕ್ತಿ ಮುಖ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು.
ನೆರೆ ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡುವಂತೆ ಕೋರಲು ನ.6ರಂದು ದೆಹಲಿಗೆ ತೆರಳಿ, ಪ್ರಧಾನಿಯವರನ್ನು ಭೇಟಿಯಾಗುವುದಾಗಿ ಹೇಳಿದರು. ನಾನು ನನ್ನ ಕುರ್ಚಿ ಉಳಿಸಿಕೊಳ್ಳಲು ದೆಹಲಿಗೆ ತೆರಳುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು.