ಬಿಜೆಪಿಯಲ್ಲಿ ತಲೆದೋರಿದ ಭಿನ್ನಮತ ಶಮನಕ್ಕಾಗಿ ಮಂಗಳವಾರ ಸಚಿವ ಜನಾರ್ದನ ರೆಡ್ಡಿ ಜೊತೆ ಸುಷ್ಮಾ ಸ್ವರಾಜ್ ಅವರು ಸುಮಾರು 2ಗಂಟೆಗಳ ಕಾಲ ನಡೆಸಿದ ಮಾತುಕತೆಯೂ ಕೂಡ ವಿಫಲವಾಗಿದ್ದು, ರಾಜ್ಯ ಬಿಜೆಪಿ ಭಿನ್ನಮತ ಮತ್ತಷ್ಟು ಬಿಗಡಾಯಿಸಿದೆ.
ಸೋಮವಾರ ಪಕ್ಷದ ವರಿಷ್ಠರಾದ ಅರುಣ್ ಜೇಟ್ಲಿ ಅವರೊಂದಿಗೆ ನಡೆದ ಮಾತುಕತೆ ಸಹ ವಿಫಲವಾದ ನಂತರ, ತಡರಾತ್ರಿಯವರೆಗೂ ಹೈಕಮಾಂಡ್ ಭಿನ್ನಮತಕ್ಕಾಗಿ ಸಾಕಷ್ಟು ಕಸರತ್ತು ನಡೆಸಿತ್ತಾದರೂ ಅದು ಯಾವುದೇ ಫಲ ಕೊಟ್ಟಿಲ್ಲ. ಆ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ಸುಷ್ಮಾ ಅವರು ರೆಡ್ಡಿ ಜತೆ ಸತತ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರೂ ಭಿನ್ನಮತ ಶಮನಗೊಂಡಿಲ್ಲ.
ಏತನ್ಮಧ್ಯೆ, ಪಕ್ಷದ ಹಿರಿಯ ಮುಖಂಡರಾದ ಡಿ.ಎಚ್.ಶಂಕರಮೂರ್ತಿ, ಮುಖ್ಯಮಂತ್ರಿ ಚಂದ್ರು ಅವರು ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ನಾಯಕತ್ವ ಬದಲಾವಣೆ ಆಗಲೇಬೇಕು: ಸುಷ್ಮಾ ಸ್ವರಾಜ್ ಅವರೊಂದಿಗೆ ರೆಡ್ಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಆ ನೆಲೆಯಲ್ಲಿ ಹೈಕಮಾಂಡ್ ಉತ್ತಮ ನಿರ್ಧಾರವನ್ನೇ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿಡಿಸಿದರು.
ಎರಡನೇ ಸುತ್ತಿನ ಮಾತುಕತೆಯೂ ವಿಫಲ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ಬಂಡಾಯದ ಧ್ವನಿ ಎತ್ತಿರುವ ರೆಡ್ಡಿ ಸಹೋದರರು ತಮ್ಮ ಪಟ್ಟನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ, ಪಕ್ಷದ ಹಿರಿಯ ಮುಖಂಡರಾದ ಸುಷ್ಮಾ ಸ್ವರಾಜ್ ಅವರು ಎರಡನೇ ಬಾರಿಯೂ ಭೇಟಿಯಾಗಿ ಮಾತುಕತೆ ನಡೆಸಿದರು. ಆದರೆ ಜನಾರ್ದನ ರೆಡ್ಡಿ ಮತ್ತು ಸುಷ್ಮಾ ಅವರ ನಡುವೆ ನಡೆದ ಎರಡನೇ ಸುತ್ತಿನ ಮಾತುಕತೆಯೂ ವಿಫಲವಾಗುವ ಮೂಲಕ ಬಿಜೆಪಿ ಬಿಕ್ಕಟ್ಟು ಮತ್ತಷ್ಟು ಉಲ್ಭಣಗೊಂಡಂತಾಗಿದೆ.