ರಾಜಯೋಗದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರ ಹಾಗೂ ಕುಜ ಗ್ರಹಗತಿಗಳ ವಕ್ರ ದೃಷ್ಟಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ನವೆಂಬರ್ 16ರವರೆಗೆ ಎಚ್ಚರಿಕೆ ಹೆಜ್ಜೆ ಇಡುವಂತೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಜಯಶ್ರೀನಿವಾಸನ್ ಭವಿಷ್ಯ ನುಡಿದಿದ್ದಾರೆ.
ಶುಕ್ರ ಗ್ರಹ ಹೆಣ್ಣಿನ ಸಂಕೇತವಾಗಿದ್ದು, ಶೋಭಾ ಕರಂದ್ಲಾಜೆ ಹಾಗೂ ಕುಜಗ್ರಹ ಗಣಪತಿಗೆ ಹೋಲುವ ಪ್ರಕಾರ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರಿಂದ ತೊಂದರೆ ಉಂಟಾಗಲಿದೆ. ಆ ನಿಟ್ಟಿನಲ್ಲಿ ಅವರನ್ನು ಕೈಬಿಡುವುದೇ ಸೂಕ್ತ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ನವೆಂಬರ್ 16ರ ರೊಳಗೆ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬಳಿಗಾರ್ ಅವರನ್ನು ಕೈಬಿಡದಿದ್ದರೆ ಬುಧಗ್ರಹದಲ್ಲಿರುವ ಗಣಿ ಧಣಿಗಳು ಫಲಗೊಂಡು ಬಲಿಷ್ಠರಾಗಿ ಅವರೇ ಅಧಿಕಾರ ಪಡೆಯುವುದರಲ್ಲಿ ಆಶ್ಚರ್ಯವಿಲ್ಲ ಎಂದ ಅವರು, ನವೆಂಬರ್ 16ರವರೆಗೆ ಪರಿಸ್ಥಿತಿ ನಿಭಾಯಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
ಗುರು ಬೆಂಬಲ ಹಾಗೂ ಕಂಟಕ ನಿವಾರಣೆಗಾಗಿ ಕೆಲ ಧಾರ್ಮಿಕ ಕೇಂದ್ರಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರೆ ಅದ್ಭುತ ಶಕ್ತಿ ಅವರನ್ನು ಆವರಿಸಲಿದೆ ಎಂದರು.
ಈಗಾಗಲೇ ಮುಜರಾಯಿ ಇಲಾಖೆ ಹಸ್ತಾಂತರಿಸಿರುವುದರಿಂದ ಒಂದು ಹಂತದ ಸಮಸ್ಯೆ ನಿವಾರಣೆಯಾಗಿದೆ. ಹಾಗಾಗಿ ಅವರು ಅವರಿಬ್ಬರನ್ನು ಕೈಬಿಟ್ಟರೆ ಮುಂದೆ ಯಾವ ಭೀತಿ ಇಲ್ಲದೆ ರಾಜ್ಯದ ಆಡಳಿತವನ್ನು ಸುಗಮವಾಗಿ ನಡೆಸಬಹುದು ಎಂದು ಹೇಳಿದ್ದಾರೆ.