ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಗುರುವಾರ ಅಂತಿಮ ತೆರೆ ಬೀಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಸಂಜೆ ತಾವು ದೆಹಲಿಗೆ ತೆರಳುತ್ತಿದ್ದು ನಾಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದೇನೆ. ಈ ಚರ್ಚೆಯ ನಂತರ ಎಲ್ಲಾ ರಾಜಕೀಯ ಗೊಂದಲಗಳು ಅಂತ್ಯವಾಗಲಿದೆ ಎಂದರು.
ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ರಾಜ್ಯದಲ್ಲಿ ಬಂಡವಾಳ ಹೂಡುವ ಸಲುವಾಗಿ ಚರ್ಚೆ ನಡೆಸಲು ಆಗಮಿಸಿರುವ ಜಪಾನ್ ನಿಯೋಗವನ್ನು ಭೇಟಿ ಮಾಡಿದ ನಂತರ ಮುಖ್ಯಮಂತ್ರಿಗಳು ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಳೆ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲಿದ್ದೇನೆ. ಆ ಸಂದರ್ಭದಲ್ಲಿ ರೆಡ್ಡಿ ಸಚಿವರ ಜೊತೆ ಮುಖಾಮುಖಿ ಭೇಟಿ ಸಾಧ್ಯತೆಗಳಿದ್ದು ಇವರ ಜೊತೆ ಚರ್ಚೆ ನಡೆಸಲಿದ್ದೇನೆ. ಈ ಚರ್ಚೆಯ ನಂತರ ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ ಎಂದರು.
ಪಕ್ಷದ ಹೈಕಮಾಂಡ್ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ರೆಡ್ಡಿ ಸಚಿವರುಗಳು ಹೈಕಮಾಂಡ್ ಆ ರೀತಿ ಹೇಳಿಲ್ಲ. ತಪ್ಪು ಗ್ರಹಿಕೆ ಎಂದು ಹೇಳುವುದು ಗೊಂದಲಗಳಿಗೆ ಕಾರಣವಾಗುತ್ತಿಲ್ಲವೇ?ಎನ್ನುವ ಪ್ರಶ್ನೆಗೆ ಯಾವುದೇ ಉತ್ತರ ನೀಡದ ಮುಖ್ಯಮಂತ್ರಿಗಳು ಈ ಬಗ್ಗೆ ಏನನ್ನು ಹೇಳಲಾರೆ, ಎಲ್ಲವೂ ನಿಮಗೆ ಗೊತ್ತಿದೆ ಎಂದಷ್ಟೆ ಹೇಳಿದರು.