ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತದ ಶಮನಕ್ಕೆ ಪಕ್ಷದ ಹೈಕಮಾಂಡ್ ತನ್ನ ಕಸರತ್ತನ್ನು ಮುಂದುವರಿಸಿದ್ದು, ರೆಡ್ಡಿ ಸಹೋದರರ ಪಟ್ಟಿಗೆ ಮೊದಲ ಹಂತದಲ್ಲಿ ಮಣಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಶುಕ್ರವಾರ ದಿಢೀರ್ ಆಗಿ ವರ್ಗಾವಣೆ ಮಾಡಿದ್ದಾರೆ. ಆದರೆ ರೆಡ್ಡಿ ಬಣ ಇದನ್ನು ತೀವ್ರವಾಗಿ ವಿರೋಧಿಸುವ ಮೂಲಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.
ಗುರುವಾರ ತಡರಾತ್ರಿಯವರೆಗೂ ಯಡಿಯೂರಪ್ಪ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದರಾದರೂ ಕೂಡ ಯಾವುದೇ ಸಂಧಾನ ಸಾಧ್ಯವಾಗಿರಲಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಬಳಿಗಾರ್ ಅವರನ್ನು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು.
ನಾಯಕತ್ವ ಬದಲಾವಣೆ ಆಗಲೇಬೇಕು: ಸಂಧಾನ ಸೂತ್ರಕ್ಕೆ ಮಣಿಯದ ರೆಡ್ಡಿ ಸಹೋದರರು ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ನಾವು ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಮುಖ್ಯಮಂತ್ರಿಗಳು ಬಳಿಗಾರ್ ಅವರನ್ನು ವರ್ಗಾಯಿಸಿದ್ದಾರೆ ಎಂದು ಹೈದರಾಬಾದ್ ನವೋಟಲ್ ಹೋಟೆಲ್‌ನಲ್ಲಿ ಠಿಕಾಣಿ ಹೂಡಿರುವ ಶಾಸಕರೊಬ್ಬರಾದ ಬೇಳೂರು ಗೋಪಾಲಕೃಷ್ಣ ಟಿವಿ9ಗೆ ಪ್ರತಿಕ್ರಿಯೆ ನೀಡಿ ತಿಳಿಸಿದ್ದಾರೆ.
NRB
ಕೇವಲ ಬಳಿಗಾರ್ ಅವರ ವರ್ಗಾವಣೆ ಮಾತ್ರ ನಮ್ಮ ಬೇಡಿಕೆಯಲ್ಲ, ನಾಯಕತ್ವ ಬದಲಾಗಬೇಕು ಎಂಬ ನಮ್ಮ ನಿರ್ಧಾರವನ್ನು ಹೈಕಮಾಂಡ್ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ನಾವು ನಮ್ಮ ರಾಜೀನಾಮೆಯನ್ನು ನೀಡುವುದು ನಿಶ್ಚಿತ ಎಂದು ವಿವರಿಸಿದ್ದಾರೆ.
ವರಿಷ್ಠರಿಗೆ ರಾಜೀನಾಮೆ ಸಲ್ಲಿಸುತ್ತೇವೆ: ಬಿಜೆಪಿ ಬಿಕ್ಕಟ್ಟು ಬಿಗಡಾಯಿಸುತ್ತಿದ್ದರೆ, ಹೈದರಾಬಾದ್‌ನಲ್ಲಿ ಠಿಕಾಣಿ ಹೂಡಿರುವ ಸುಮಾರು 50ಕ್ಕೂ ಹೆಚ್ಚು ಶಾಸಕರು ತಮ್ಮ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮೂಲಕ ದೆಹಲಿಯಲ್ಲಿರುವ ಸಚಿವ ಜನಾರ್ದನ ರೆಡ್ಡಿಯವರಿಗೆ ರವಾನಿಸಿದ್ದಾರೆ. ಆದರೆ ನಮ್ಮ ರಾಜೀನಾಮೆ ಮೇಲೆ ಮುಖ್ಯಮಂತ್ರಿಗಳಿಗೆ ವಿಶ್ವಾಸವಿಲ್ಲ ಎಂದಿರುವ ಬೇಳೂರು, ಆ ನಿಟ್ಟಿನಲ್ಲಿ ಇಂದು ಸಂಜೆ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಿಗೆ ರಾಜೀನಾಮೆ ನೀಡಲು ಸಿದ್ದವಾಗಿರುವುದಾಗಿ ತಿಳಿಸಿದ್ದಾರೆ.
ಸಿಎಂ ನಿವಾಸದಲ್ಲಿ ದಿಢೀರ್ ಸಭೆ: ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಎತ್ತಂಗಡಿ ಮಾಡಿ ಆದೇಶ ಹೊರಬಿದ್ದ ನಂತರವೂ ಗಣಿಧಣಿಗಳು ತಮ್ಮ ಪಟ್ಟನ್ನು ಬಿಗಿಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿಗಳ ರೇಸ್‌ಕೋರ್ಸ್ ನಿವಾಸದಲ್ಲಿ ಸಚಿವ ಸಿ.ಎಂ.ಉದಾಸಿ ನೇತೃದಲ್ಲಿ ದಿಢೀರ್ ಸಭೆ ನಡೆಯುತ್ತಿದೆ.
ಪಕ್ಷದಲ್ಲಿ ಮತ್ತೆ ಯಾರ ತಲೆದಂಡವಾಗಲಿದೆ, ಮುಂದಿನ ನಿಲುವೇನು ಎಂಬ ಬಗ್ಗೆ ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಹಾಲಪ್ಪ ಸೇರಿದಂತೆ 15ಮಂದಿ ಸಿಎಂ ಆಪ್ತರ ಶಾಸಕರು ಚರ್ಚೆ ನಡೆಸುತ್ತಿದ್ದಾರೆ.
NRB
ಕುರ್ಚಿ ಬಿಡಲು ನಾನು ರೆಡಿ-ಶೋಭಾ ಕರಂದ್ಲಾಜೆ: 'ಪಕ್ಷ ಬಯಸಿದರೆ ರಾಜೀನಾಮೆ ನೀಡಲು ಸಿದ್ಧ' ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
'ಯಾವ ತಪ್ಪಿಗೆ ರಾಜೀನಾಮೆ ನೀಡಬೇಕು' ಎಂದು ಈ ಹಿಂದೆ ಕರಂದ್ಲಾಜೆ ಪ್ರಶ್ನಿಸಿದ್ದರು. ಭಿನ್ನಮತೀಯರ ಪ್ರಮುಖ ಬೇಡಿಕೆಗಳಲ್ಲಿ ಶೋಭಾರನ್ನು ಸಂಪುಟದಿಂದ ಕೈ ಬಿಡಬೇಕು ಎಂಬುದು ಸಹ ಒಂದು. ಆಡಳಿತದ ಪ್ರತಿ ಹಂತದಲ್ಲಿ ಶೋಭಾ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಭಿನ್ನರ ಆರೋಪ.
ಬಿಕ್ಕಟ್ಟು ಶಮನಕ್ಕೆ ಬಿಜೆಪಿ ವರಿಷ್ಠರು ರೂಪಿಸಿದ ಸಂಧಾನ ಸೂತ್ರದಲ್ಲಿ ಶೋಭಾರಿಗೆ ಕೋಕ್ ನೀಡುವುದೂ ಸೇರಿದೆ.'ನಾನು ಪಕ್ಷದ ಶಿಸ್ತಿನ ಸಿಪಾಯಿ . ಪಕ್ಷ ಬಯಸಿದರೆ ಮಂತ್ರಿಗಿರಿ ತೊರೆಯುವೆ. ಆದರೆ ಈವರೆಗೆ ನನಗೆ ಯಾರೂ ರಾಜೀನಾಮೆ ನೀಡುವಂತೆ ಸೂಚಿಸಿಲ್ಲ' ಎಂದು ಶೋಭಾ ಹೇಳಿದ್ದಾರೆ.