ಅತಿವೃಷ್ಟಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸದೆ ಹೈದರಾಬಾದ್‌ನಲ್ಲಿ ಮೋಜು ಮಾಡುತ್ತಿರುವ ಸಚಿವ-ಶಾಸಕರ ವಿರುದ್ಧ ಉತ್ತರ ಕರ್ನಾಟಕದ ವಿವಿಧೆಡೆ ಶುಕ್ರವಾರ ಪ್ರತಿಭಟನೆ ನಡೆಸಿ, ರೆಡ್ಡಿ ಮತ್ತು ಯಡಿಯೂರಪ್ಪ ಬಣಗಳ ಶಾಸಕರ ಅಣಕು ಹರಾಜು ಮಾಡಲಾಯಿತು. 200ಕೋಟಿ ರೂಪಾಯಿಗೆ ಶಾಸಕರು ಹರಾಜಾದರು!
ರಾಜ್ಯ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜನರ ಹಿತ ಮರೆತು ಸ್ವಹಿತಾಸಕ್ತಿಗೆ ಮುಂದಾಗಿರುವ ಬಿಜೆಪಿ ಶಾಸಕರ ವಿರುದ್ಧ ಕನ್ನಡಪರ ಸಂಘಟನೆಗಳು ಆಯೋಜಿಸಿದ್ದ ಈ ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.
ರಾಮನಗರದಲ್ಲಿ ಜಯನಗರ ಸಂಘಟನೆ ಆಯೋಜಿಸಿದ್ದ ಹರಾಜಿನಲ್ಲಿ ಸಚಿವ ಜನಾರ್ದನ ರೆಡ್ಡಿ 7ರೂ., ಸಿಎಂ ಯಡಿಯೂರಪ್ಪ 1ರೂ. ಹಾಗೂ ಶಾಸಕ ರೇಣುಕಾಚಾರ್ಯ 50ಪೈಸೆಗೆ ಹರಾಜಾದರು. ಪ್ರಕ್ರಿಯೆ ಬಳಿಕ ಯಡಿಯೂರಪ್ಪ, ಜನಾರ್ದನ ರೆಡ್ಡಿ ಭಾವಚಿತ್ರಗಳನ್ನು ಕತ್ತೆಗಳ ಕೊರಳಿಗೆ ನೇತುಹಾಕಿ ಮಿನಿವಿಧಾನಸೌಧದವರೆಗೆ ಮೆರವಣಿಗೆ ನಡೆಸಲಾಯಿತು.
ಅದೇ ರೀತಿ ಹುಬ್ಬಳ್ಳಿಯ ಸ್ಥಳೀಯ ಕನ್ನಡಪರ ಮಹಾಮಂಡಲ ಸಂಘಟನೆ ಆಯೋಜಿಸಿದ್ದ ಉತ್ತರ ಕರ್ನಾಟಕದ ರೆಸಾರ್ಟ್ ವಾಸಿ ಶಾಸಕರ ಹರಾಜು ಪ್ರಕ್ರಿಯೆಯಲ್ಲಿ ಶಾಸಕರಾದ ಚಿಕ್ಕನಗೌಡ್ರು 10ಕೋಟಿ, ಸೀಮಾ ಮಸೂತಿ 8ಕೋಟಿ, ಶಂಕರ ಪಾಟೀಲ ಮುನೇನಕೊಪ್ಪ 7ಕೋಟಿ ಹಾಗೂ ವೀರಭದ್ರಪ್ಪ ಹಾಲಹರವಿ 5ಕೋಟಿಗೆ ಹರಾಜಾದರು.