ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತದ ಜಟಾಪಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾಜೀನಾಮೆ ಪ್ರತಿಭಟನೆ ನಡೆಸಿ, ರಾಜೀನಾಮೆ ನೀಡಿದ್ರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಯಾವುದೇ ಕಾರಣಕ್ಕೂ ಸಚಿವೆ ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಬಾರದು ಎಂದು ಶನಿವಾರ ಶೋಭಾ ಅವರ ನಿವಾಸದ ಮುಂಭಾಗ ಜಮಾಯಿಸಿದ ಅಭಿಮಾನಿಗಳು ಆಗ್ರಸಿದ್ದಾರೆ. ಒಂದು ವೇಳೆ ಶೋಭಾ ಅವರು ರಾಜೀನಾಮೆ ನೀಡಿದರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವೆಯಾಗಿ, ಮೈಸೂರು ಉಸ್ತುವಾರಿ ಸಚಿವೆಯಾಗಿ ಶೋಭಾ ಕರಂದ್ಲಾಜೆ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೂ ಕೂಡ ಸಚಿವೆ ಸ್ಥಾನದಿಂದ ಅವರನ್ನು ಯಾಕೆ ತೆಗೆಯಲಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಕಳೆದ ಹತ್ತು ದಿನಗಳಿಂದ ರಾಜ್ಯರಾಜಕಾರಣದಲ್ಲಿ ತಲೆದೋರಿರುವ ಭಿನ್ನಮತ ಇನ್ನೂ ಶಮನಗೊಂಡಿಲ್ಲ. ಶುಕ್ರವಾರ ಕೊನೆಗೂ ಬಿಜೆಪಿ ಹೈಕಮಾಂಡ್ ರೆಡ್ಡಿ ಬಣದ ಆರು ಬೇಡಿಕೆಗಳನ್ನು ಈಡೇರಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದರು. ಅದರಲ್ಲಿ ಸಚಿವೆ ಶೋಭಾ ಕರಂದ್ಲಾಜೆಗೆ ಗೇಟ್ ಪಾಸ್ ನೀಡುವುದು ಕೂಡ ಸೇರಿತ್ತು.
ಏತನ್ಮಧ್ಯೆಯೇ, ಸಚಿವೆ ಶೋಭಾ ಕರಂದ್ಲಾಜೆ ಕೂಡ ಹೈಕಮಾಂಡ್ ಸೂಚಿಸಿದರೆ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ ಎಂಬುದಾಗಿಯೂ ಹೇಳಿದ್ದರು.