ಮಕ್ಕಳು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿರುವುದರಿಂದ ಅವರಿಗೆ ಕನ್ನಡ ಶಿಕ್ಷಣ ಕೊಡಿಸುವುದು ಅನಿವಾರ್ಯ ಎಂದು ರಾಷ್ಟ್ರ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರಮನೆ ಮೈದಾನದಲ್ಲಿ ಆಯೋಜಿಸಿದ 'ಬೆಂಗಳೂರು ಪುಸ್ತಕೋತ್ಸವ-2009' ಕಾರ್ಯಕ್ರಮವನ್ನು ಉದ್ಘಾಟಿಸಿ, ಈಗಿನ ವಿದ್ಯಾರ್ಥಿಗಳು ಮುಂದಿನ ಓದುಗರಾಗುತ್ತಾರೆ. ಅವರಿಗೆ ಕನ್ನಡ ಬಾರದಿದ್ದರೆ ಕಷ್ಟ . ಇದರಿಂದ ಪುಸ್ತಕ ಸಂಸ್ಕೃತಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿದರು.
ಟಿ.ವಿ. ದಾಳಿಯಿಂದ ಪುಸ್ತಕಗಳು ಮೂಲೆ ಗುಂಪಾಗಿವೆ ಎಂಬುದು ತಪ್ಪು . ಇನ್ನೂ ಜನರಲ್ಲಿ ಪುಸ್ತಕ ಪ್ರೀತಿ ಉಳಿದುಕೊಂಡಿದೆ. ಅಲ್ಲದೆ ಅದು ಗಟ್ಟಿ ನೆಲೆಯನ್ನು ಸ್ಥಾಪಿಸಿಕೊಂಡಿದೆ. ವರ್ಷದಲ್ಲಿ 3000 ಕನ್ನಡ ಕೃತಿಗಳು ಬಿಡುಗಡೆಯಾಗುತ್ತಿವೆ . ಇಂತಹ ಪುಸ್ತಕಗಳನ್ನು ಜನರು ಕೊಂಡು ಹೋಗಿ ಓದಬೇಕೆಂದು ಕರೆ ನೀಡಿದರು .
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜಯರಾಮರಾಜೆ ಅರಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.