ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರ ನಡುವಿನ ಜಂಗಿಕುಸ್ತಿ ಮುಂದುವರಿದಿದ್ದರೆ. ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವ ಜನಾರ್ದನ ರೆಡ್ಡಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.. ಮತ್ತೊಂದೆಡೆ ಎಲ್ಲ ಬಿಕ್ಕಟ್ಟು ಬಗೆಹರಿದಿರುವುದಾಗಿ ಯಡಿಯೂರಪ್ಪ ಹೇಳಿಕೆ ನೀಡುವ ಮೂಲಕ ರಾಜ್ಯರಾಜಕಾರಣ ತ್ರಿಶಂಕು ಸ್ಥಿತಿಗೆ ತಲುಪಿದೆ.
ಸಹೋದರ ಕರುಣಾಕರ ರೆಡ್ಡಿ ನಿವಾಸದಲ್ಲಿ ಶನಿವಾರ ಜನಾರ್ದನ ರೆಡ್ಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾಗಬೇಕು ಎಂಬ ನಮ್ಮ ನಿರ್ಧಾರ ಅಚಲವಾಗಿದೆ ಎಂದು ಪುನರುಚ್ಚರಿಸಿದರು. ಅಲ್ಲದೆ, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿಯನ್ನೂ ನಡೆಸಿದರು.
ನಮ್ಮ ನಿಲುವಿನ ಕುರಿತು ತಾಯಿ ಸುಷ್ಮಾಸ್ವರಾಜ್ ಹಾಗೂ ಹೈಕಮಾಂಡ್‌ಗೆ ವಿವರಿಸಲಾಗಿದೆ. ಆ ನಿಟ್ಟಿನಲ್ಲಿ ಹೈಕಮಾಂಡ್ ಉತ್ತಮ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸ ಇರುವುದಾಗಿ ಹೇಳಿದರು.
ಈ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ಅಭಿವೃದ್ಧಿ ಮಾಡಲು ಹೊರಟರೆ, ಈ ಮನೆಯ ಯಜಮಾನ ಅಡ್ಡಗಾಲು ಹಾಕುತ್ತಾರೆ. ಎಲ್ಲಿ ನಮಗೆ ಹೆಸರು ಬರುತ್ತದೋ ಎಂದು ತಿಳಿದುಕೊಂಡು ಬಳ್ಳಾರಿ ಮತ್ತು ಗದಗ ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚಿನ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡುವ ಮೂಲಕ ನಮಗೆ ಸಹಕಾರ ದೊರೆಯಬಾರದು ಎಂಬ ರೀತಿಯಲ್ಲಿ ನಡೆದುಕೊಂಡಿರುವುದಾಗಿ ಆರೋಪಿಸಿದರು.
NRB
ಬಿಕ್ಕಟ್ಟು ಬಗೆಹರಿದಿದೆ-ಯಡಿಯೂರಪ್ಪ ವಿಶ್ವಾಸ: ಬಿಜೆಪಿಯಲ್ಲಿನ ಬಿಕ್ಕಟ್ಟು ಶಮನವಾಗಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವದೆಹಲಿಯಲ್ಲಿ ವೈಷ್ಣೋದೇವಿ ದರ್ಶನಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿಶ್ವಾಸ ವ್ಯಕ್ತಪಡಿಸಿದರು.
ಬಿಕ್ಕಟ್ಟಿನ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲಾಗಿದ್ದು ನಾಯಕತ್ವ ಬದಲಾವಣೆ ಸೇರಿದಂತೆ ಪಕ್ಷದಲ್ಲಿನ ಭಿನ್ನಮತ ಸಮಸ್ಯೆ ಪರಿಹಾರವಾಗಿದೆ ಎಂದು ಹೇಳಿದರು.
ಬಿಕ್ಕಟ್ಟನ್ನು ಶಮನಗೊಳಿಸಿದ ಪಕ್ಷದ ವರಿಷ್ಠರಿಗೆ ನನ್ನ ಅಭಿನಂದನೆಗಳು. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಯಾರನ್ನೂ ಕಡೆಗಣಿಸುವುದಿಲ್ಲ ಎಂದು ಹೇಳಿದರು.
ಸ್ಪೀಕರ್-ರೆಡ್ಡಿ ಬ್ರದರ್ಸ್ ಮಾತುಕತೆ ಅಂತ್ಯ: ಕರುಣಾಕರ ರೆಡ್ಡಿ ಅವರ ಮನೆಯಲ್ಲಿ ಮಾತುಕತೆ ನಡೆದ ನಂತರ, ಸಚಿವರಾದ ಕರುಣಾಕರ ರೆಡ್ಡಿ, ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಸ್ಪೀಕರ್ ಜಗದೀಶ್ ಶೆಟ್ಟರ್ ನಿವಾಸಕ್ಕೆ ತೆರಳಿ ರಹಸ್ಯ ಮಾತುಕತೆ ನಡೆಸಿದರು.ಮುಂದಿನ ನಡೆಯ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ ಮಾತುಕತೆಯ ಪೂರ್ಣ ವಿವರ ದೊರೆತಿಲ್ಲ. ಇದೊಂದು ಸೌಹಾರ್ದಯುತ ಭೇಟಿ, ಸ್ಪೀಕರ್ ಮನೆಯ ಮುಂದೆ ರಾಜಕೀಯ ಮಾತಾಡಲ್ಲ ಎಂದಷ್ಟೇ ಕರುಣಾಕರ ರೆಡ್ಡಿ ಪ್ರತಿಕ್ರಿಯಿಸಿದರು.