ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ರಾಜಕೀಯ ಅಖಾಡಕ್ಕೆ ಇಳಿಯಲಿ ಎಂದು ಶಾಸಕ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ ಸಲಹೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಹುದ್ದೆಯಲ್ಲಿದ್ದುಕೊಂಡು ರಾಜಕೀಯ ಮಾಡುವುದು, ಆ ಸ್ಥಾನದ ಘನತೆಗೆ ಕುಂದು ತರುವಂತಹದಾಗಿದ್ದು, ಶೆಟ್ಟರ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ನಾಡಿನ ಜನತೆಗೆ ಪೊಳ್ಳು ಆಶ್ವಾಸನೆ ನೀಡಿ ಅಧಿಕಾರ ಗದ್ದುಗೆ ಏರಿದ ಬಿಜೆಪಿಯ ಬಣ್ಣ ಈಗ ಬಯಲಾಗಿದೆ ಎಂದ ಅವರು, ಜನತೆಯ ಹಿತಾಸಕ್ತಿಯನ್ನು ಕಡೆಗಣಿಸಿ, ಆಂತರಿಕ ಕಚ್ಚಾಟದಲ್ಲಿ ತೊಡಗಿರುವ ಸರ್ಕಾರ ಇನ್ನೆರಡು ದಿನಗಳಲ್ಲಿ ಆಡಳಿತದತ್ತ ಗಮನ ಹರಿಸದಿದ್ದರೆ, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ದಿಕ್ಕು ತೋಚದ ಸ್ಥಿತಿಯಲ್ಲಿರುವ ಪ್ರವಾಹ ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾದ ಸರ್ಕಾರ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿಗಳು ಹಾಗೂ ಸಚಿವರು ಬರೀ ಬಾಯಿಮಾತಿನಲ್ಲೇ ಸಂತ್ರಸ್ತರನ್ನು ಉಪಚರಿಸುತ್ತಿದ್ದಾರೆ ಎಂದರು.