ಅಕ್ರಮ ಗಣಿಗಾರಿಕೆ ಸಂಬಂಧ ಸುಪ್ರೀಂಕೋರ್ಟ್‌ನ ಸಮಿತಿ ನೀಡಿರುವ ವರದಿ ಬಗ್ಗೆ ತಮಗೆ ಮಾಹಿತಿ ಇಲ್ಲ, ಮಾಹಿತಿ ಬಂದ ನಂತರ ಈ ಬಗ್ಗೆ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರೆಡ್ಡಿ ಸಚಿವರನ್ನು ಸಂಪುಟದಿಂದ ಕೈಬಿಡುವ ಘಟ್ಟಕ್ಕೆ ಈ ಪ್ರಕರಣ ತಲುಪಿಲ್ಲ ಎಂದು ಹೇಳಿದರು.
ಆಂಧ್ರ, ಕರ್ನಾಟಕ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಸಚಿವ ಜನಾರ್ದನ ರೆಡ್ಡಿ ನೇತೃತ್ವದ ಕಂಪನಿಯ ಗಣಿಗಾರಿಕೆಯನ್ನು ಬಂದ್ ಮಾಡುವಂತೆ ಸುಪ್ರೀಂಕೋರ್ಟ್‌ನ ಸಮಿತಿ ಶಿಫಾರಸು ಮಾಡಿರುವ ವರದಿಯ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸುಪ್ರೀಂಕೋರ್ಟ್‌ನ ಸಮಿತಿಯ ಶಿಫಾರಸು ಹಿನ್ನೆಲೆಯಲ್ಲಿ ರೆಡ್ಡಿ ಸಚಿವರನ್ನು ಸಂಪುಟದಿಂದ ಕೈಬಿಡುವಿರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಮುಖ್ಯಮಂತ್ರಿಗಳು, ತಮ್ಮ ಬಳಿ ಮಾಹಿತಿಗಳಿಲ್ಲ. ಮಾಹಿತಿ ಬಂದ ನಂತರ ನೋಡೋಣ ಎಂದಷ್ಟೇ ಹೇಳಿದರು.
ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ಬೇಡ ಎಂದಿದ್ದೀರಲ್ವಾ ಎಂಬುದಕ್ಕೆ, ಇದರಲ್ಲಿ ಸತ್ಯಾಂಶ ಇಲ್ಲ ಎನ್ನುವ ಕಾರಣಕ್ಕೆ ರಾಜ್ಯದಲ್ಲಿ ಸಿಬಿಐ ತನಿಖೆ ಬೇಡ ಎಂದಿದ್ದೆ ಎಂದರು.