ಮನೆ ಕೆಲಸ ಮಾಡದ, ಅಪರಿಚಿತರೊಂದಿಗೆ ಮಾತನಾಡಿದ ಮತ್ತು ಮನೆ ಸರಂಜಾಮು ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಪತ್ನಿಯನ್ನು ನಿಂದಿಸಿದರೆ ಅದು ಭಾರತೀಯ ದಂಡ ಸಂಹಿತೆಯ(ಐಪಿಸಿ) 498(ಎ) ವ್ಯಾಖ್ಯೆ(ವರದಕ್ಷಿಣೆ ಹಿಂಸೆ)ಗೆ ಒಳಪಡುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಐಪಿಸಿ 498(ಎ)ಅಡಿಯಲ್ಲಿ ತಮ್ಮನ್ನು ಶಿಕ್ಷೆಗೆ ಒಳಪಡಿಸಿದ ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಜಿ.ಆರ್.ಲೋಕನಾಥ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅರಳಿ ನಾಗರಾಜ್ ಅವರಿದ್ದ ಏಕಸದಸ್ಯ ಪೀಠ ಲೋಕನಾಥ್ ಮತ್ತಿತರರನ್ನು ಆರೋಪಮುಕ್ತಗೊಳಿಸಿತು.
ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳು ಐಪಿಸಿ ಕಾಯ್ದೆ 498(ಎ) ವ್ಯಾಖ್ಯೆಗೆ ಒಳಪಡುವುದಿಲ್ಲ. ಈ ಆರೋಪಗಳು ವರದಕ್ಷಿಣೆಗಾಗಿ ಕಿರುಕುಳ ಪ್ರಕರಣದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಜಿ.ಆರ್.ಲೋಕನಾಥ್ ಅವರು ಸರಿತಾ ಎಂಬಾಕೆಯನ್ನು ವಿವಾಹವಾಗಿದ್ದು, 2007ರ ಮಾ.10ರಂದು ಈಕೆ ಮನೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಳು. ಈ ಕುರಿತು ಮೃತಳ ತಾಯಿ ಸಿದ್ದಮ್ಮ ತನ್ನ ಅಳಿಯ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಆದರಂತೆ ಪೊಲೀಸರು ಲೋಕನಾಥ್ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಕೊಲೆ ಮತ್ತು ವರದಕ್ಷಿಣೆ ಹಿಂಸೆ ಪ್ರಕರಣ ದಾಖಲಿಸಿದ್ದರು. ಈ ಪೈಕಿ ಕೊಲೆ ಪ್ರಕರಣದಿಂದ ಲೋಕನಾಥ್ ಮತ್ತಿತರರು ಬಿಡುಗಡೆಗೊಂಡಿದ್ದರು ವರದಕ್ಷಿಣೆ ಹಿಂಸೆ ಕಾರಣಕ್ಕಾಗಿ ಇವರಿಗೆ ಅಧೀನ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.