ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಪ್ರಥಮ ತುಳು ಸಮ್ಮೇಳನ ಕಾರ್ಯಕ್ರಮವೂ ಡಿಸೆಂಬರ್ 10 ರಿಂದ ಅದ್ದೂರಿಯಾಗಿ ಆರಂಭವಾಗಲಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಗುರುವಾರ ಸಂಜೆ 5ಗಂಟೆಗೆ ಉದ್ಘಾಟಿಸಲಿದ್ದಾರೆ.
ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಸಮ್ಮೇಳನದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಈ ಕಾರ್ಯಕ್ರಮದ ವಿಶೇಷವೆನೆಂದರೆ ಸಮ್ಮೇಳನಕ್ಕಾಗಿಯೇ ಒಂದು ಕೃತಕ ಗ್ರಾಮವೊಂದನ್ನು 120 ಎಕರೆ ಪ್ರದೇಶದಲ್ಲಿ ರಚಿಸಲಾಗಿದೆ. ಇದಕ್ಕೆ 'ತುಳು ಗ್ರಾಮ' ಎಂದು ನಾಮಕರಣ ಮಾಡಲಾಗಿದ್ದು, ಎರಡು ತಿಂಗಳಿನಿಂದ 5000 ಮಂದಿ 'ತುಳು ಗ್ರಾಮ' ನಿರ್ಮಿಸಲು ದುಡಿದಿದ್ದಾರೆ.
'ತುಳುಗ್ರಾಮದಲ್ಲಿ 60 ವರ್ಷಗಳ ಹಿಂದಿನ ತುಳುನಾಡನ್ನು ಇಂದಿನ ಪೀಳಿಗೆಯವರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಳೆಯ ತಲೆಮಾರಿನವರು ಹೇಗೆ ಬದುಕುತ್ತಿದ್ದರು ಮತ್ತು ಜೀವನಕ್ಕಾಗಿ ಯಾವುದನ್ನು ಹೇಗೆ ಅವಲಂಬಿಸುತ್ತಿದ್ದರು ಎಂಬುದು ಸಚಿತ್ರವಾಗಿ ನಮ್ಮ ಮುಂದೆ ಗೋಚರಿಸಲಿದೆ. ಗದ್ದೆ, ತೋಟ, ದೈವದ ಮನೆ, ಶಾಲೆ, ಕ್ಷೌರದಂಗಡಿ, ಚಹಾದ ಅಂಗಡಿ, ಪೋಸ್ಟ್ ಆಫೀಸ್, ಪಂಚಾಯತ್ ಕಚೇರಿ ಸೇರಿದಂತೆ ತುಳು ಇತಿಹಾಸದ ಹತ್ತು ಹಲವು ಸಜೀವ ನಿದರ್ಶನಗಳು ಇಲ್ಲಿವೆ.
ಅಜ್ಜಂದಿರ ಕಾಲದ ಪೀಠೋಪಕರಣ, ಮನೆ ಬಳಕೆಯ ವಸ್ತುಗಳು, ಬೇಸಾಯಕ್ಕೆ ಬೇಕಾಗುವ ನೇಗಿಲು ಹಾಗೂ 1950ರ ಮಾರೀಸ್ ಕಾರು ಸೇರಿದಂತೆ ಅನೇಕ ವಸ್ತುಗಳನ್ನು ವಸ್ತು ಪ್ರದರ್ಶನದಲ್ಲಿ ಇಡಲಾಗಿದೆ. ಇವನ್ನು ಕಂಡಾಗ ಈ ವಸ್ತುಗಳೆಲ್ಲ ಈಗ ಎಲ್ಲಿ ಹೋದವು ಎಂಬ ಪ್ರಶ್ನೆ ಮನದಲ್ಲಿ ಮೂಡದೇ ಇರಲಾರದು.
ಉಜಿರೆ ಮುಖ್ಯ ರಸ್ತೆಯ ಅಕ್ಕ ಪಕ್ಕದಲ್ಲಿ ಕಂಬಳ, ಯಕ್ಷಗಾನ ಹಾಗೂ ಭೂತಕೋಲ ನೃತ್ಯದ ಚಿತ್ರಗಳನ್ನು ತೂಗುಹಾಕಲಾಗಿದೆ. ವೇದಿಕೆಯಲ್ಲಿನ ಭತ್ತದ ಕಣಜ ಮತ್ತು ಜೈನರ ಸ್ತೂಪ ಕಣ್ಮನ ಸೆಳೆಯಲಿದೆ. ಈ ವೇದಿಕೆಯಲ್ಲಿ 15,000ಕ್ಕಿಂತಲೂ ಹೆಚ್ಚಿನ ಆಸನ ವ್ಯವಸ್ಥೆ ಮಾಡಲಾಗಿದೆ. 10,000 ಮಂದಿ ಅಲ್ಲೇ ವಾಸ್ತವ್ಯ ಹೂಡಬಹುದಾಗಿದೆ.
ತುಳು ಭಾಷೆ, ಸಂಸ್ಕೃತಿ, ರಂಗಭೂಮಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳ ಜೊತೆಗೆ ಕವಿಗೋಷ್ಠಿ ಹಾಗೂ ಮನೋರಂಜನಾ ಕಾರ್ಯಕ್ರಮಗಳು ವಿವಿಧ ವೇದಿಕೆಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಕುಡಿಪು ಮತ್ತು ಪಡ್ಡಾಯ್ ಶೀರ್ಷಿಕೆಯ ಸ್ಮರಣ ಸಂಚಿಕೆ ಹಾಗೂ ಅನಾದಿ ಕಾಲದಿಂದ ಬೆಳದು ಬಂದ ತುಳು ಸಂಸ್ಕೃತಿಯ ಬಗೆಗೆ ವಿವರಿಸಲಾದ 51 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ.
60 ಕೌಂಟರ್‌ಗಳಲ್ಲಿ ಭೋಜನದ ವ್ಯವಸ್ಥೆಯಿದ್ದು, 60 ಬಗೆಯ ತುಳುನಾಡು ಶೈಲಿಯ ತಿನಿಸುಗಳನ್ನು ಬಡಿಸಲಾಗುತ್ತದೆ. ಅದು ಕೇವಲ 5ರೂ.ಗಳಿಗೆ ಯಾರಿಗುಂಟು ಯಾರಿಗಿಲ್ಲ. ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ, ಮಂಗಳೂರು, ಕಾರ್ಕಳ ಮತ್ತು ಉಡುಪಿಯಲ್ಲಿ ವಾಸ್ತವ್ಯ ಹೂಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.