ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೊನೆಗೂ ಕುತೂಹಲ ಅಂತ್ಯ; ಸದಾನಂದ ಗೌಡ ನೂತನ ಸಿಎಂ (BJP | Hicommond | Yeddyurappa | Sadananda gowda | Jagadish shettar)
PR
ನಗರದ ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆದ ನೂತನ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕೊನೆಗೂ ರಹಸ್ಯ ಮತದಾನ ನಡೆಸುವ ಮೂಲಕ ಅಂತ್ಯ ಕಂಡಿದ್ದು, ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಬಣದ ಡಿ.ವಿ.ಸದಾನಂದ ಗೌಡ ಅವರು ರಾಜ್ಯದ 26ನೇ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ರಾಜ್ಯರಾಜಕಾರಣದಲ್ಲಿ ಕಳೆದ ಒಂದು ವಾರದಿಂದ ತಲೆದೋರಿದ್ದ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.

ಮಧ್ಯಾಹ್ನ 12ಗಂಟೆಯಿಂದ ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಸಾಕಷ್ಟು ಚರ್ಚೆ, ಗೊಂದಲ ನಡೆದಿತ್ತು. ಆದರೆ ಪಕ್ಷದ ವರಿಷ್ಠರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಅವರು ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ಬಣದ ಶಾಸಕರ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಕೂಡ ಯಶಸ್ಸು ಸಿಕ್ಕಿಲ್ಲವಾಗಿತ್ತು.

ಕೊನೆಗೂ ನೂತನ ಮುಖ್ಯಮಂತ್ರಿ ಆಯ್ಕೆಗೆ ರಹಸ್ಯ ಮತದಾನ ಮಾಡಲು ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಹಾಜರಿದ್ದ 118 ಶಾಸಕರಿಗೆ ರಹಸ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಮತದಾನದಲ್ಲಿ ಯಡಿಯೂರಪ್ಪ ಬಣದ ಡಿವಿ ಸದಾನಂದ ಗೌಡರು 62 ಮತ ಪಡೆಯುವ ಮೂಲಕ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರೆ, ಅನಂತ್, ಈಶ್ವರಪ್ಪ ಬಣದ ಜಗದೀಶ್ ಶೆಟ್ಟರ್ 55 ಮತ ಪಡೆಯುವ ಮೂಲಕ ಗದ್ದುಗೆ ಗುದ್ದಾಟದಲ್ಲಿ ಪರಾಭವಗೊಂಡಿದ್ದಾರೆ.

ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆ ಚರ್ಚೆಯಾಗಿಲ್ಲ-ಶೆಟ್ಟರ್
ಏತನ್ಮಧ್ಯೆ ಜಗದೀಶ್ ಶೆಟ್ಟರ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಹೈಕಮಾಂಡ್ ನಿರ್ಧರಿಸಿತ್ತು ಎಂಬ ಮಾಧ್ಯಮ ವರದಿಯನ್ನು ತಳ್ಳಿಹಾಕಿರುವ ಶೆಟ್ಟರ್, ಉಪ ಮುಖ್ಯಮಂತ್ರಿ ಪಟ್ಟದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಧ್ಯಾಹ್ನ 2ಗಂಟೆಗೆ ರಹಸ್ಯ ಮತದಾನ ಪ್ರಕ್ರಿಯೆ ಅಂತ್ಯಗೊಂಡಿತ್ತು. ಇದರಲ್ಲಿ ಕಾನೂನು ಸಚಿವ ಸುರೇಶ್ ಕುಮಾರ್ ಹಾಗೂ ಸೊಗಡು ಶಿವಣ್ಣ ಮತದಾನ ಮಾಡಲು ನಿರಾಕರಿಸಿದ್ದರಿಂದ ಒಟ್ಟು 117 ಮಂದಿ ಶಾಸಕರು ರಹಸ್ಯವಾಗಿ ಮತ ಚಲಾಯಿಸಿದ್ದರು. ನಂತರ ಮತಎಣಿಕೆ ಪ್ರಕ್ರಿಯೆ ಅಂತ್ಯಗೊಂಡಾಗ ಡಿವಿ ಸದಾನಂದ ಗೌಡರು ಏಳು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.

ಆಗಸ್ಟ್ 4ರಂದು ಪ್ರಮಾಣವಚನ ಸ್ವೀಕಾರ:
ರಾಜ್ಯದ 26ನೇ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿವಿ ಸದಾನಂದ ಗೌಡರು ಆಗಸ್ಟ್ 4ರಂದು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಆರ್ಎಸ್ಎಸ್ ನನಗೆ ತಾಯಿ ಇದ್ದಂತೆ:ಗೌ
ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಡಿ.ವಿ.ಸದಾನಂದ ಗೌಡರು ಚಾಮರಾಜಪೇಟೆಯಲ್ಲಿನ ಆರ್ಎಸ್ಎಸ್ ಕೇಂದ್ರ ಕಚೇರಿ ಕೇಶವಕೃಪಾಕ್ಕೆ ಭೇಟಿ ನೀಡಿ ಹಿರಿಯ ಮುಖಂಡರ ಜತೆ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆರ್ಎಸ್ಎಸ್ ನನಗೆ ತಾಯಿ ಇದ್ದಂತೆ. ಹಾಗಾಗಿ ತಾಯಿಯ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದು ಆಶೀರ್ವಾದ ಪಡೆದರೇನೇ ನನ್ನ ಮುಂದಿನ ಕೆಲಸ ಸುಗಮವಾಗುತ್ತದೆ ಎಂಬ ನಂಬಿಕೆ ನನ್ನದು ಎಂದು ಈ ಸಂದರ್ಭದಲ್ಲಿ ಹೇಳಿದರು.

ಏತನ್ಮಧ್ಯೆ ಈಶ್ವರಪ್ಪ ಬಣದ ಜಗದೀಶ್ ಶೆಟ್ಟರ್ ಸೇರಿದಂತೆ 55 ಶಾಸಕರು ಗುರುವಾರ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ಗೈರು ಹಾಜರಾಗುತ್ತಾರೆಂಬ ವದಂತಿ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಉತ್ತರ ನೀಡದೆ ಹೊರಟು ಹೋದರು.

ಪುತ್ತೂರಿನಲ್ಲಿ ಜನರ ಹರ್ಷ:
ಕರಾವಳಿ ಭಾಗದ ಎರಡನೇ ಮುಖ್ಯಮಂತ್ರಿಯಾಗಿ ( ಈ ಮೊದಲು ಕಾರ್ಕಳದ ಎಂ.ವೀರಪ್ಪ ಮೊಯ್ಲಿ) ಆಯ್ಕೆಯಾಗಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಡಿವಿ ಸದಾನಂದ ಗೌಡರ ಹುಟ್ಟೂರು ಹಾಗೂ ಪುತ್ತೂರು, ಮಂಗಳೂರಿನಲ್ಲಿ ಜನರು ಬೀದಿ, ಬೀದಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಅಲ್ಲದೇ ಬೆಂಗಳೂರಿನಲ್ಲಿರುವ ಡಿವಿ ನಿವಾಸದಲ್ಲಿಯೂ ಸಂಭ್ರಮ ಮನೆ ಮಾಡಿತ್ತು. ಜನಪರ ಕಾಳಜಿಯುಳ್ಳ ಗೌಡರ ಆಯ್ಕೆ ತುಂಬಾ ಸಂತಸ ತಂದಿರುವುದಾಗಿ ಪತ್ನಿ ಡಾಟಿ, ಪುತ್ರ ಕಾರ್ತಿಕ್ ಹಾಗೂ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ತಮ್ಮ ಖುಷಿ ಹಂಚಿಕೊಂಡರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಜೆಪಿ, ಹೈಕಮಾಂಡ್, ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್