ನಂಬಿದ್ರೆ ನಂಬಿ, ಬಿಟ್ರೆ ಬಿಡಿ... ಈ ಸರಣಿಯಲ್ಲಿ ನಾವೀ ಬಾರಿ ವಿಚಿತ್ರ ರೋಗ ಚಿಕಿತ್ಸಾ ಪದ್ಧತಿಯೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ.
ಚೆನ್ನಾಗಿ ಬಾರಿಸಿದರೆ ರೋಗ ಓಡಿಹೋಗುತ್ತದೆ ಎಂಬುದು ಈ ಚಿಕಿತ್ಸಾ ಪದ್ಧತಿಯ ಸೂತ್ರ. ಕಾಲಿನಿಂದ, ಕೈಯಿಂದ ಚೆನ್ನಾಗಿ ಥಳಿಸಿದರೆ ರೋಗ ಕಂಗೆಟ್ಟು ಓಡುತ್ತದೆಯಂತೆ!
ಛತ್ತೀಸಗಢದ ಮನ್ಸಾರಾಮ್ ಎಂಬಾತ ರೋಗಿಗಳ ಅಸ್ವಾಸ್ಥ್ಯವನ್ನು ಗುಣಪಡಿಸಲು ಅನುಸರಿಸುವುದು ಈ ಪದ್ಧತಿಯನ್ನೇ.
ಈ ವಿಷಯದ ಬಗ್ಗೆ ನಮಗೆ ತಿಳಿಸಿದಾಗ, ನಾವು ಧಾವಿಸಿದ್ದು ಛತ್ತೀಸಗಢಕ್ಕೆ. ರಾಜಧಾನಿ ರಾಯಪುರದಿಂದ ಸುಮಾರು 75 ಕಿ.ಮೀ. ಹಾಗೂ ಧಾಂತಾರಿ ಎಂಬ ಪಟ್ಟಣದಿಂದ 35 ಕಿ.ಮೀ. ದೂರದಲ್ಲಿದೆ ಲಾಡೆರ್ ಹೆಸರಿನ ಈ ಪುಟ್ಟ ಹಳ್ಳಿ. ರೋಗಗಳನ್ನು ಈ ವ್ಯಕ್ತಿ ಒದ್ದೋಡಿಸುತ್ತಿರೋದು ಈ ಹಳ್ಳಿಯಲ್ಲೇ. ಅಲ್ಲಿ ಹೋದಾಗ ನೂರಾರು ಮಂದಿ ಒಂದು ಮರದ ಸಮೀಪ ಜಮಾಯಿಸಿದ್ದರು. ಅವರೆಲ್ಲಾ ರೋಗವನ್ನು ವಸ್ತುಶಃ ತೊಲಗಿಸಿಕೊಳ್ಳಲು ಬಂದವರು.
ಸ್ವಲ್ಪ ಸಮಯದ ಬಳಿಕ ಮನ್ಸಾರಾಮ್ ಬಂದು ಮರದ ಕೆಳಗೆ ಕುಳಿತುಕೊಳ್ಳುತ್ತಾನೆ. ಮತ್ತು ಅಲ್ಲಿದ್ದವರಿಗೆಲ್ಲಾ ಹೊಡೆಯತೊಡಗುತ್ತಾನೆ. ಅವನಿಂದ ಹೊಡೆಸಿಕೊಳ್ಳಲು, ಒದೆಸಿಕೊಳ್ಳಲು ಉಳಿದ ರೋಗಿಗಳು ಸಾಲುಗಟ್ಟಿ ನಿಲ್ಲುತ್ತಾ, ತಮ್ಮ ಸರದಿಗಾಗಿ ಕಾಯುತ್ತಿದ್ದರು.
ಯಾವುದೇ ರೋಗವನ್ನೂ ಗುಣಪಡಿಸಬಲ್ಲೆ ಎನ್ನುತ್ತಾನಾತ. ಮೂರು ವರ್ಷದ ಹಿಂದೆ ನಾನೊಬ್ಬ ರೈತನಾಗಿದ್ದೆ. ಒಂದು ರಾತ್ರಿ ದೇವರು ಕನಸಿನಲ್ಲಿ ಬಂದು, ಜನರ ರೋಗಗಳನ್ನು ಗುಣಪಡಿಸುವಂತೆ ಆದೇಶಿಸಿದ. ಇದರಿಂದ ಪ್ರೇರಣೆ ಪಡೆದು ಈ ಕೆಲಸಕ್ಕೆ ಇಳಿದೆ ಎಂದು ಆತ ವಿವರಿಸಿದ್ದಾನೆ.
|