ಇದೆಂಥ ತಲೆಬರಹ ಅಂತ ಬೆಚ್ಚಿ ಬೀಳಬೇಕಾಗಿಲ್ಲ. ತಾನು ಕೊಟ್ಟ ಮಾತ್ರೆ ಸೇವಿಸಿದರೆ ಗಂಡು ಸಂತಾನ ಗ್ಯಾರಂಟಿ ಅಂತ ಹೇಳುವ ವೈದ್ಯರೊಬ್ಬರ ಕಥಾನಕವಿದು.
ಹೆಣ್ಣು-ಗಂಡು ನಡುವಣ ಭೇದ ಭಾವದ ಅಂತರ ತಗ್ಗಿರುವ ಈ ಆಧುನಿಕ ಯುಗದಲ್ಲಿ ಗಂಡು ಮಗುವಿಗಾಗಿ ಹಂಬಲಿಸುವ ಕುಟುಂಬಗಳು ಇನ್ನೂ ಇವೆ. ಗಂಡು ಮಗುವಿಗಾಗಿ ಮಾಟ ಮಂತ್ರಕ್ಕೆ ಮೊರೆ ಹೋಗುವವರು, ವಂಚಕರ ಕಪಿಮುಷ್ಠಿಯಲ್ಲಿ ಸಿಲುಕುವವರು ಮತ್ತು ಗರ್ಭಸ್ಥ ಹೆಣ್ಣು ಶಿಶುವನ್ನು ಹುಟ್ಟುವ ಮೊದಲೇ ಕೊಲ್ಲುವವರೂ ಅಲ್ಲಲ್ಲಿದ್ದಾರೆ. ಈ ಬಾರಿಯ ‘ನೀವು ನಂಬುವಿರಾ’ ಸರಣಿಯಲ್ಲಿ ನಾವು, ಇದೇ ವಿಷಯವನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಗಂಡು ಮಗು ಹುಟ್ಟುವುದಕ್ಕೆ ಔಷಧಿ ನೀಡುತ್ತೇನೆ ಎಂದು ಹೇಳಿಕೊಳ್ಳುವ ವೈದ್ಯರೊಬ್ಬರನ್ನು ಇಲ್ಲಿ ನಾವು ಪರಿಚಯಿಸುತ್ತಿದ್ದೇವೆ. ಜನ್ಮ ತಾಳಲಿರುವ ಮಗುವಿನ ಲಿಂಗ ನಿರ್ಧರಿಸುವ ಸಾಮರ್ಥ್ಯ ತನಗಿದೆ ಎಂದು ಹೇಳಿಕೊಳ್ಳುತ್ತಿರುವವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಪವನ್ ಕುಮಾರ್ ಅಜ್ಮೇರಾ.
ಇಂದೋರ್‌ನ ಗಾಂಧಿ ನಗರ ಪ್ರದೇಶದಲ್ಲಿ ಅವರ ಕ್ಲಿನಿಕ್ ಇದೆ. ಅವರ ಹೆಗ್ಗಳಿಕೆಗಳೆಲ್ಲವನ್ನೂ ಕ್ಲಿನಿಕ್‌ನ ಗೋಡೆಗಳಲ್ಲಿ ತೂಗು ಹಾಕಲಾಗಿದೆ. ಅವರ ಪ್ರಕಾರ, ಕನಿಷ್ಠಪಕ್ಷ ಒಬ್ಬ ಹೆಣ್ಣು ಮಗಳಿರುವವರಿಗೆ ಮಾತ್ರವೇ ಗಂಡು ಮಗುವಾಗುವ ಔಷಧಿ ನೀಡಲಾಗುತ್ತದೆ. ಇದಕ್ಕವರು ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರವನ್ನು ತಂದು ತೋರಿಸುವುದು ಕಡ್ಡಾಯ. ತಮ್ಮ ಚಿಕಿತ್ಸೆಯಿಂದಾಗಿ ಇದುವರೆಗೆ 300ಕ್ಕೂ ಹೆಚ್ಚು ಮಹಿಳೆಯರು ಗಂಡು ಮಗು ಪಡೆದಿದ್ದಾರೆ ಎನ್ನುತ್ತಾರವರು ಹೆಮ್ಮೆಯಿಂದ. ಅರ್ಹ ಮಹಿಳೆಯರು ಈ ವೈದ್ಯ ನೀಡಿದ ಗುಳಿಗೆಯನ್ನು ಹಾಲಿನೊಂದಿಗೆ ಸೇವಿಸಬೇಕಾಗುತ್ತದೆ.
ಹೇಗಾದರೂ ಮಾಡಿ ಗಂಡು ಮಗು ಪಡೆಯಲೇಬೇಕು ಎಂಬ ಬಲವಾದ ಇಚ್ಛೆ ಹೊಂದಿರುವವರು ಸಮಾಜದಲ್ಲಿ ಸಾಕಷ್ಟು ಮಂದಿಯಿದ್ದಾರೆ. ಅಂಥವರಿಗೆಲ್ಲ ಈ ವೈದ್ಯರ ಹೇಳಿಕೆ ಮೇಲೆ ಬಲವಾದ ವಿಶ್ವಾಸ. ಈ ವೈದ್ಯ ನೀಡಿದ ಔಷಧಿಯಿಂದಾಗಿ ತಮಗೆ ಗಂಡುಮಗುವಾಗಿದೆ ಅಂತ ಹೇಳಿಕೊಳ್ಳುವವರಿಗೇನೂ ಕೊರತೆಯಿಲ್ಲ. ಅಂಥವರನ್ನೂ ಕೂಡ ಅಲ್ಲಿ ಮಾತನಾಡಿಸಲಾಯಿತು. ಮೋಹಿನಿ ಉಪಾಧ್ಯಾಯ ಎಂಬವರು ಹೇಳಿದ್ದೂ ಅದನ್ನೇ. ತನಗೀಗಾಗಲೇ ಹೆಣ್ಣು ಮಗುವೊಂದಿದೆ. ಹಾಗಾಗಿ ಗಂಡು ಮಗು ಬಯಸಿ ಇಲ್ಲಿಗೆ ಔಷಧಿಗಾಗಿ ಬಂದೆ. ಔಷಧಿ ಸೇವಿಸಿಯೇ ತನಗೆ ಗಂಡು ಮಗುವಾಗಿದೆ ಎಂದಿದ್ದಾರಾಕೆ.
ಡಾ.ಪವನ್ ಕುಮಾರ್ ಹೇಳಿಕೆಯನ್ನು ಹೆಚ್ಚಿನ ವೈದ್ಯರು ವಿರೋಧಿಸುತ್ತಾರೆ. ಇಂಥದ್ದು ಸಾಧ್ಯವೇ ಇಲ್ಲ ಎನ್ನುತ್ತಾರೆ. ಇದು ಜನರನ್ನು ವಂಚಿಸುವ ಹೇಳಿಕೆಗಳೇ ಹೊರತು ಬೇರೇನೂ ಅಲ್ಲ ಅಂತ ವೆಬ್‌ದುನಿಯಾ ತಂಡಕ್ಕೆ ತಿಳಿಸಿದವರು ಖ್ಯಾತ ಶಿಶುತಜ್ಞ ಮುಕೇಶ್ ಬಿರ್ಲಾ. ಹುಟ್ಟುವ ಮಗುವಿನ ಲಿಂಗವನ್ನು ಬದಲಾಯಿಸುವುದು ವೈಜ್ಞಾನಿಕವಾಗಿ ಸಾಧ್ಯವೇ ಇಲ್ಲ ಎನ್ನುತ್ತಾರವರು.
ವೈದ್ಯರೇನೇ ನಂಬಿದರೂ, ಪವನ್ ಕುಮಾರ್ ಅವರ ಸೋ-ಕಾಲ್ಡ್ ಚಿಕಿತ್ಸೆಯಂತೂ ಆ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾಗಿಬಿಟ್ಟಿದೆ. ಗಂಡು ಸಂತಾನ ಬಯಕೆಯಿಂದ ಅದೆಷ್ಟೋ ಮಂದಿ ಇಲ್ಲಿಗೆ ಬರುತ್ತಲೇ ಇದ್ದಾರೆ. ದೇಶದಲ್ಲಿ ಹೆಣ್ಣುಶಿಶು ಜನನ ಪ್ರಮಾಣ ಆತಂಕಕಾರಿಯಾಗಿ ಕಡಿಮೆಯಾಗುತ್ತಿದ್ದರೂ, ಯಾರು ಕೂಡ ಈ ಅಕ್ರಮ ವ್ಯವಹಾರವನ್ನು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಹುಟ್ಟುವ ಮೊದಲು ಮಗುವಿನ ಲಿಂಗ ಪತ್ತೆಯೇ ಶಿಕ್ಷಾರ್ಹ ಅಪರಾಧವಾಗಿರುವ ಈ ದೇಶದಲ್ಲಿ, ಜನರು ಮತ್ತು ಸರಕಾರ ಮೌನವಾದಂತಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ? ನಿಮ್ಮ ಅನಿಸಿಕೆ ಬರೆಯಿರಿ.
|