ಮಧ್ಯಪ್ರದೇಶದ ಬಿಜಲಾಪುರ್ ಗ್ರಾಮದಲ್ಲಿ ದತ್ತ ಮಂದಿರವಿದೆ. ಮಂದಿರದಲ್ಲಿ ಭಕ್ತರು ಪೂಜಾ ಪಾತ್ರೆಯನ್ನು ಕೈಯಲ್ಲಿ ಹಿಡಿದು ವಿಚಿತ್ರವಾಗಿ ವರ್ತಿಸುತ್ತಾರೆ. ಪೂಜೆಯಲ್ಲಿ ಭಾಗವಹಿಸಿದಲ್ಲಿ ಭಕ್ತರನ್ನು ಆವಾಹಿಸಿದ ದೆವ್ವದ ಕಾಟದಿಂದ ಶೀಘ್ರ ಮುಕ್ತಿ ಸಿಗುತ್ತದೆ ಎನ್ನುವುದು ಸ್ಥಳೀಯರ ನಂಬಿಕೆಯಾಗಿದೆ.
ದೆವ್ವದ ಕಾಟದಿಂದ ಮುಕ್ತಿ ಹೊಂದಲು ಈ ರೀತಿಯ ವಿಚಿತ್ರ ವರ್ತನೆ ತೋರುವ ಭಕ್ತರನ್ನು ನೋಡಿಬರಬೇಕೆಂದು ನಿರ್ಧರಿಸಿ ದತ್ತ ಮಂದಿರದತ್ತ ಸಾಗಿದೆವು. ದೂರದಿಂದ ನೋಡಿದಾಗ ಮಂದಿರದ ಮೇಲೆ ಕೆಂಪು ಬಣ್ಣದ ಧ್ವಜ ಹಾರಿಸಿರುವುದು ಕಂಡುಬಂತು. ಮಂದಿರದ ಆವರಣದಲ್ಲಿ ಭಕ್ತರ ಜನಸಂದಣಿ ತುಂಬಿ ತುಳುಕುತ್ತಿತ್ತು. ಶುಕ್ರವಾರದಂದು ಮಹಾ ಆರತಿ ಪೂಜೆಯನ್ನು ಆರಂಭಿಸಲಾಗುತ್ತದೆ ಎಂದು ನಮಗೆ ತಿಳಿದು ಬಂದಿತು. ಆರತಿಯಲ್ಲಿ ಭಾಗವಹಿಸಲು ಮಂದಿರದಲ್ಲಿ ನೆರೆದಿದ್ದ ಭಕ್ತಸಮೂಹ ಒಟ್ಟಾಗಿ ಪ್ರಾರ್ಥಿಸುತ್ತಾರೆ.
ಮಂದಿರದಲ್ಲಿ ದತ್ತ ದೇವರ ಮೂರ್ತಿಯನ್ನು ಭಕ್ತಿಯಿಂದ ಪ್ರತಿಷ್ಠಾಪಿಸಲಾಗಿದೆ. ಮಂದಿರದ ಅರ್ಚಕರಾದ ಮಹೇಶ್ ಮಹಾರಾಜ್ ಅವರು ನಮ್ಮೊಂದಿಗೆ ಮಾತನಾಡಿ, ಮಂದಿರ ಏಳುನೂರು ವರ್ಷಗಳಷ್ಟು ಪುರಾತನವಾದುದು. ನಮ್ಮ ವಂಶದ ಅನೇಕ ತಲೆಮಾರುಗಳು ದೇವರ ಸೇವೆಯಲ್ಲಿ ಕಾರ್ಯನಿರ್ವಹಿಸಿವೆ. ನಮ್ಮ ಅಜ್ಜಂದಿರ ಪ್ರಕಾರ ನಮ್ಮ ವಂಶದವರಾದ ಹರಿನಾಮ ಸಾಹೇಬ್ ದತ್ತ ದೇವರ ಮುಂದೆ 12 ವರ್ಷಗಳ ನಿರಂತರ ತಪಸ್ಸು ಮಾಡಿದಾಗ ಪ್ರಸನ್ನರಾದ ದತ್ತ ದೇವರು ನಿನಗೇನು ಬೇಕು ಕೇಳು ಎಂದಾಗ ನನಗೇನೂ ಬೇಡ. ಮಂದಿರಕ್ಕೆ ಬಂದ ಭಕ್ತರು ಬರಿಗೈಲಿ ಮರಳಬಾರದು, ಆದ್ದರಿಂದ ಈ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿರು ಎಂದು ಬೇಡಿಕೊಂಡಾಗ ದೇವರು ಒಪ್ಪಿ ಮಂದಿರದಲ್ಲಿ ನೆಲಸಿದ್ದಾರೆ ಎಂದು ಅರ್ಚಕ ಮಹಾರಾಜ್ ತಿಳಿಸಿದರು.
ಮಹಾಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಭಕ್ತರ ಸಮಸ್ಯೆಗಳು ಹಾಗೂ ನೋವುಗಳನ್ನು ದತ್ತ ದೇವರು ಖಂಡಿತ ಗುಣಪಡಿಸುತ್ತಾರೆ. ಯಾವುದೇ ಅನುಮಾನ ಬೇಡ ಎಂದು ಅರ್ಚಕ ಮಹೇಶ್ ಮಹಾರಾಜ್ ತಿಳಿಸಿದರು.
ಅರ್ಚಕರೊಂದಿಗೆ ಮಾತನಾಡುವಾಗ ಮಹಾಆರತಿ ಆರಂಭವಾಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿರುವುದು ಕಂಡುಬಂದಿತು. ಮಹಿಳೆಯರು ಆರತಿ ತಟ್ಟೆಯನ್ನು ತಮ್ಮ ಕೈಯಲ್ಲಿ ಹಿಡಿದು ದತ್ತ ದೇವರನ್ನು ಪ್ರಾರ್ಥಿಸುತ್ತಿದ್ದರು. ಆದರೆ ಸ್ವಲ್ಪ ಸಮಯ ಕಳೆದಂತೆ ಆರತಿ ಬೆಳಗಿಸುತ್ತಿದ್ದ ಭಕ್ತರು ವಿಚಿತ್ರವಾಗಿ ವರ್ತಿಸಲಾರಂಭಿಸಿದರು. ಕೆಲವರು ಜೋರಾಗಿ ಕೂಗುವುದು, ನೆಲದ ಮೇಲೆ ಬಿದ್ದು ಹೊರಳಾಡುವುದು ಸೇರಿದಂತೆ ಇನ್ನಿತರ ವಿಚಿತ್ರ ವರ್ತನೆಗಳನ್ನು ತೋರತೊಡಗಿದರು. ದೇಹದಲ್ಲಿರುವ ದೆವ್ವದಿಂದಾಗಿ ಭಕ್ತರು ಈ ರೀತಿಯ ವರ್ತನೆ ತೋರುತ್ತಾರೆ ಎಂದು ಅರ್ಚಕ ಮಹಾಜನ್ ತಿಳಿಸಿದರು.
|