ಕರ್ನಾಟಕದ ವಿವಿಧೆಡೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರಸಿದ್ಧರಾಗಿರುವ ನೀರು ಪತ್ತೆ ಹಚ್ಚುವವರ ಬಗ್ಗೆ ಕೇಳಿದ್ದೀರಿ. ಹಲವು ವಿಧಾನಗಳ ಮೂಲಕ ಅವರು ಅಂತರ್ಜಲ ಎಲ್ಲಿದೆ ಎಂದು ಕಂಡು ಹಿಡಿಯುವ ಸಾಮರ್ಥ್ಯ ಹೊಂದಿರುತ್ತಾರೆ. ಅಂಥವರ ಸಾಲಿಗೆ ಸೇರುವವರು ಒಂದು ಕೋಲು ಅಥವಾ ತೆಂಗಿನ ಕಾಯಿಯ ಸಹಾಯದಿಂದ ನೀರಿನ ಮೂಲ ತಿಳಿಸಿಕೊಡಬಲ್ಲ ಗಂಗಾನಾರಾಯಣ ಶರ್ಮಾ.
ಈ ಬಾರಿಯ 'ನೀವು ನಂಬುವಿರಾ' ಸರಣಿಗೆ ನಾವು ಆಯ್ದುಕೊಂಡದ್ದು ಇಂದೋರ್ ನಿವಾಸಿಯ ಈ ಕೌಶಲ್ಯವನ್ನು. ಇಂಗ್ಲಿಷಿನ ವೈ ಆಕಾರದ ಒಂದು ಕೋಲು ಮತ್ತು ತೆಂಗಿನ ಕಾಯಿ... ಇವಿಷ್ಟೇ ಅವರು ನೀರಿನ ಮೂಲ ಗುರುತಿಸಲು ಬಳಸುವ ಪರಿಕರಗಳು. ಇವುಗಳಿಂದ ನೀರಿನ ಮಟ್ಟವನ್ನು ಅಳೆಯುವುದು ಸಾಧ್ಯ ಎನ್ನುತ್ತಾರೆ ಅವರು. ಯಾವ ಭಾಗದಲ್ಲಿ ನೀರಿನ ಮಟ್ಟ ಹೆಚ್ಚು ಇದೆ ಮತ್ತು ಎಲ್ಲಿ ಕಡಿಮೆಯಿದೆ ಎಂಬುದನ್ನು ಅವರು ನಿಖರವಾಗಿ ಹೇಳಬಲ್ಲರಂತೆ.
ಕನಿಷ್ಠ ಆಳದಲ್ಲಿ ನೀರು ಇದೆಯೇ ಎಂಬುದನ್ನು ತಿಳಿಯಲು ಶರ್ಮಾ ಅವರು ವೈ ಆಕಾರದ ಕೋಲು ಬಳಸುತ್ತಾರೆ. ಈ ಕಡ್ಡಿಯ ಎರಡೂ ತುದಿಗಳನ್ನು ಹಿಡಿದುಕೊಳ್ಳುವ ಅವರು ನಿಗದಿತ ಸ್ಥಳದಲ್ಲಿ ಒಂದು ಸುತ್ತು ಬರುತ್ತಾರೆ. ಈ ಕಡ್ಡಿ ಯಾವ ಬಿಂದುವಿನಲ್ಲಿ ಪೂರ್ಣ ವೇಗದಲ್ಲಿ ತಿರುಗುತ್ತದೆಯೋ ಅಲ್ಲಿ ಸಾಕಷ್ಟು ನೀರಿದೆ ಎಂದರ್ಥ. ಇದನ್ನು ಜಲಶೋಧಕ ತಂತ್ರ ಎಂದು ಕರೆಸಿಕೊಳ್ಳುವ ಅವರು, ಇದರಲ್ಲಿ ಶೇ.80ರಷ್ಟು ಯಶಸ್ಸು ಲಭಿಸಿದೆ ಎಂದು ವಿಶ್ವಾಸದಿಂದ ಹೇಳುತ್ತಾರೆ.
ವಿಜ್ಞಾನ ಕ್ಷೇತ್ರದಲ್ಲೂ ಈ ವಿಧಾನ ಬಳಸಹುದು. ಭೂಕಂಪದಿಂದ ಬಾಧೆಗೀಡಾದ ನದಿಗಳ ಪ್ರದೇಶಗಳನ್ನು ಪತ್ತೆ ಹಚ್ಚಲು ಮಾತ್ರವಲ್ಲದೆ, ಎಲ್ಲಿ ನೆಲಬಾಂಬ್ ಇರಿಸಲಾಗಿದೆ ಎಂಬುದನ್ನೂ ಪತ್ತೆ ಹಚ್ಚಬಹುದು ಎನ್ನುತ್ತಾರೆ ಶರ್ಮಾ. ಒಂದು ಲೆಕ್ಕಾಚಾರದ ಪ್ರಕಾರ, ನೀರಿನ ಅತಿ ಬಳಕೆಯಿಂದಾಗಿ ಭೂಮಿಯ ಅಂತರ್ಜಲದ ಮಟ್ಟವು 700 ಅಡಿಗಳಷ್ಟಕ್ಕೆ ಕುಸಿದಿದ್ದು, ಇಂಥ ತಂತ್ರವು ನೀರು ಪತ್ತೆ ಹಚ್ಚುವಲ್ಲಿ ವರವಾಗಿ ಪರಿಣಮಿಸಿದೆ.
ಈ ಕವಲು ಕೋಲು ಮಾತ್ರವಲ್ಲದೆ, ನೀರಿನ ಇರುವಿಕೆ ಖಚಿತಪಡಿಸಿಕೊಳ್ಳಲು ತೆಂಗಿನ ಕಾಯಿಯನ್ನೂ ಬಳಸುತ್ತಾರೆ ಶರ್ಮಾ. ತೆಂಗಿನ ಕಾಯಿಯನ್ನು ಅಂಗೈಯಲ್ಲಿ ಇರಿಸಲಾಗುತ್ತದೆ. ಯಾವುದೇ ಸ್ಥಳದಲ್ಲಿ ಅಂತರ್ಜಲ ಇದೆ ಎಂದಾದರೆ, ಈ ತೆಂಗಿನ ಕಾಯಿ ಅಂಗೈಯಲ್ಲಿ ತನ್ನಿಂತಾನೇ ನೇರವಾಗಿ ನಿಲ್ಲುತ್ತದೆ. ಆ ಪ್ರದೇಶದಲ್ಲಿ ನೀರಿನ ಮೂಲ ಇದ್ದಂತೆಯೇ ಎನ್ನುತ್ತಾರೆ ಶರ್ಮಾ.
ಈಗೀಗ ಬಿಲ್ಡರ್‌ಗಳು ಕೂಡ ಇದೇ ತಂತ್ರ ಅನುಸರಿಸಿ ಬಾವಿ, ಕೆರೆ ತೋಡಲು ಮುಂದಾಗುತ್ತಾರೆ. ಈ ಜ್ಞಾನವನ್ನು ಬಳಸಿದರೆ ಖರ್ಚೂ ಉಳಿಯುತ್ತದೆ, ಶ್ರಮವೂ ಉಳಿಯುತ್ತದೆ. ಆದರೆ ಶರ್ಮಾ ಅವರ ಹೇಳಿಕೆ ಪ್ರತಿ ಬಾರಿಯೂ ನಿಜವಾಗುತ್ತದೆಯೇ ಎಂಬುದು ಚರ್ಚಾರ್ಹ. ಹಲವು ಬಾರಿ 150ರಿಂದ 200 ಅಡಿ ಆಳದಲ್ಲಿ ನೀರಿದೆ ಅಂತ ಅವರು ಹೇಳಿದ್ದರೂ, 400 ಅಡಿ ತೋಡಿದರೂ ನೀರು ದೊರಕದ ಉದಾಹರಣೆಗಳೂ ಇವೆ. ಆದರೂ ಶರ್ಮಾಜಿ ಅವರ ಬಗ್ಗೆ ಸ್ಥಳೀಯ ಜನರಿಗೆ ಅಪಾರ ನಂಬಿಕೆ.
ಬಿಲ್ಡರ್ ರೋಹಿತ್ ಖಾತ್ರಿ ಎಂಬವರು ಬೋರ್ ವೆಲ್ ತೋಡಲು ಶರ್ಮಾಜಿಯ ಸಹಾಯ ಪಡೆದಿದ್ದಾರೆ. ಈ ತಂತ್ರವನ್ನು ಅತಿಲೌಕಿಕ ಜ್ಞಾನ ಎಂದೇನೂ ಹೇಳಲಾಗದು ಎನ್ನುತ್ತಾರವರು. ಅವರು ಹೇಳಿದ್ದು ನಿಜವಾಗದಿದ್ದರೂ, ಬೇಸಿಗೆಯ ತೀವ್ರ ತಾಪಮಾನದಿಂದಾಗಿ ನೀರಿನ ಮಟ್ಟ ಕೆಳಗೆ ಹೋಗಿರುತ್ತದೆ ಎಂಬ ಅಭಿಪ್ರಾಯ ಅವರದು.
ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬೋರ್ ವೆಲ್ ತೋಡಲು ಸಿಕ್ಕಾಪಟ್ಟೆ ವೆಚ್ಚವಾಗುತ್ತದೆ. ಅಷ್ಟು ಖರ್ಚು ಮಾಡಿಯೂ ನೀರು ಸಿಗದಿದ್ದರೆ... ಎಂಬ ಚಿಂತೆಯಿಂದ ಜನ ಹೆಚ್ಚು ಹೆಚ್ಚು ಶರ್ಮಾರಂಥವರ ಮೊರೆ ಹೋಗುತ್ತಿದ್ದಾರೆ. ಹಣ ಮತ್ತು ಶ್ರಮ ಉಳಿಸಲು ಇಂಥ ತಂತ್ರಕ್ಕೆ ಮೊರೆ ಹೋಗುವುದು ಅನಿವಾರ್ಯ ಅನ್ನುತ್ತಾರವರು. ಈ ಬಗ್ಗೆ ನಿಮಗೇನನಿಸುತ್ತದೆ? ನಮಗೆ ಬರೆದು ತಿಳಿಸಿ.
|