ಈ ಬಾರಿಯ ‘ನೀವು ನಂಬುವಿರಾ’ ಸರಣಿಯಲ್ಲಿ ನೀವು ತಿಳಿಯಲಿರುವುದು ದೆವ್ವ-ಪ್ರೇತ ಬಾಧೆಗಳಿಂದ ಮುಕ್ತಿ ದೊರಕಿಸುವುದಕ್ಕೆ ಹೆಸರು ಪಡೆದ ನಯೀ ಮಾತಾ ಮಂದಿರದ ಬಗ್ಗೆ. ಮಧ್ಯಪ್ರದೇಶದ ಬರ್ಹಾನ್‌ಪುರ ಜಿಲ್ಲೆಯ ಬಿರೋದಾಬಾದ್‌ನಲ್ಲಿದೆ ಈ ಪುಟ್ಟ ಮಂದಿರ. ಮಂದಿರ ಚಿಕ್ಕದಾದರೂ, ಜನ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬರುವುದರಿಂದ ಇಲ್ಲಿನ ಪ್ರಸಿದ್ಧಿಯೂ ಹೆಚ್ಚು.
ದುಷ್ಟಶಕ್ತಿಗಳ ಬಾಧೆಯಿಂದ ಮಾನಸಿಕ, ದೈಹಿಕ ತೊಂದರೆಗೀಡಾದವರು ಇಲ್ಲಿಗೆ ಆಗಮಿಸುತ್ತಾರೆ. ಗುಣಕಾಣದ ರೋಗಗಳನ್ನು ಇಲ್ಲಿನ ದೇವಿ ಗುಣಪಡಿಸುತ್ತಾಳೆ ಎಂದು ಜನ ನಂಬುತ್ತಾರೆ. ಈ ಜನ ನರಳುತ್ತಾ ಇರುವ ರೋಗ ಗುಣಪಡಿಸಲು ಯಾವುದೇ ವೈದ್ಯರಿಗೆ ಸಾಧ್ಯವಾಗಿಲ್ಲವಂತೆ. ಸತತ ಐದು ಮಂಗಳವಾರ ಈ ನಯೀಮಾತಾ ಮಂದಿರಕ್ಕೆ ಭೇಟಿ ನೀಡಿ ಭಕ್ತಿಯಿಂದ ಪ್ರಾರ್ಥಿಸಿದರೆ, ಯಾವುದೇ ರೋಗ ಕೂಡ ಶಮನವಾಗುತ್ತದೆ ಎನ್ನುತ್ತಾರೆ ಮಹಾರಾಷ್ಟ್ರದವರಾದ ರವೀಂದ್ರ ಎಂಬವರು. ಇಲ್ಲಿಗೆ ಬರುವವರಿಗೆ ಕೆಲವೊಂದು ನಿರ್ಬಂಧಗಳಿರುತ್ತವೆ ಮಾತ್ರವಲ್ಲದೆ, ಯಾವುದೇ ವೈದ್ಯರಿಂದ ಚಿಕಿತ್ಸೆ ಪಡೆಯಬಾರದು ಎಂಬ ಸಲಹೆಯೂ ದೊರೆಯುತ್ತದೆ.
ಪ್ರಾರ್ಥನೆಯ ಅವಧಿಯಲ್ಲಿ ಏನು ಮಾಡಬಹುದು, ಏನು ಮಾಡಬಾರದು ಎಂಬ ನಿರ್ಬಂಧಗಳ ಬಗ್ಗೆ ಭಕ್ತಾದಿಗಳಿಗೆ ವಿಭಿನ್ನ ನಂಬಿಕೆಗಳಿವೆ. ಮತ್ತೊಬ್ಬ ಅನುಯಾಯಿ ಸದಾಶಿವ ಚೌಧುರಿ ಎಂಬವರು ಹೇಳಿದಂತೆ, ಬಿಳಿ ಬಣ್ಣದ ಯಾವುದೇ ಆಹಾರ ಸೇವನೆ ನಿಷಿದ್ಧ. ಕಪ್ಪು ಬಣ್ಣದ ಬಟ್ಟೆ ಧರಿಸುವುದು ಅಶುಭ ಸೂಚಕ. ಈ ರೀತಿಯ ನಿಯಮಾವಳಿಗಳನ್ನು ಅವರು ಅನುಸರಿಸದಿದ್ದರೆ, ರೋಗಿಗಳ ರೋಗ ಮತ್ತಷ್ಟು ಉಲ್ಬಣಗೊಳ್ಳುತ್ತದೆ ಎಂಬ ನಂಬಿಕೆ ಇಲ್ಲಿಯವರದು.
ನಯೀ ಮಾತಾ ಮಂದಿರದ ಬಳಿಯಲ್ಲೇ, ಸಬ್ಜನ ಬಾಯಿ ಎಂಬ ಮಹಿಳೆಯು ಪವಾಡ ಮತ್ತು ಮಂತ್ರಶಕ್ತಿಗಳಿಂದ ತಮ್ಮದೇ ಆದ ಲೋಕವೊಂದನ್ನು ಸೃಷ್ಟಿಸಿಕೊಂಡಿದ್ದಾಳೆ. ನಯೀಮಾತಾ ದೇವಿಯು ತನ್ನ ಶರೀರದಲ್ಲಿ ಆವಾಹಿಸುತ್ತಾಳೆ, ಇದರಿಂದಾಗಿ ತಾನು ಜನರ ರೋಗಗಳನ್ನು ಗುಣಪಡಿಸುವುದು ಸಾಧ್ಯ ಎನ್ನುತ್ತಾಳೆ ಆಕೆ. ಸಬ್ಜನ ಬಾಯಿಯ ಪ್ರಾರ್ಥನೆ ಮತ್ತು ಮಂತ್ರೋಚ್ಚಾರಗಳ ನೆರವಿನಿಂದ ಇಲ್ಲಿಗೆ ಬರುವ ಜನರು ತಮ್ಮನ್ನು ಆವರಿಸಿಕೊಂಡಿರುವ ದೆವ್ವಬಾಧೆ, ಭೂತಬಾಧೆ ಕಳೆದುಕೊಳ್ಳುತ್ತಾರಂತೆ. ಕುಷ್ಠ ಮತ್ತು ಸಂತಾನ ಹೀನತೆಯಂತಹ ಸಮಸ್ಯೆಗಳಿಗೂ ತಮ್ಮಲ್ಲಿ ಪರಿಹಾರವಿದೆ ಎನ್ನುತ್ತಾಳಾಕೆ. ರೋಗಪೀಡಿತ ವ್ಯಕ್ತಿಯು ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋದರೆ, ದೇವಿಯು ಕೋಪಗೊಳ್ಳುತ್ತಾಳೆ ಮತ್ತು ಆ ವ್ಯಕ್ತಿ ಸಾಯುತ್ತಾನೆ ಎಂದೂ ಆಕೆ ಹೇಳುತ್ತಾಳೆ.
ನಾವಿಂದು ಪ್ರತಿಯೊಂದು ಚಿಕ್ಕ ಅಥವಾ ದೊಡ್ಡ ಕಾಯಿಲೆಗಳಿಗೆ ವೈದ್ಯರ ಬಳಿ ಹೋಗುತ್ತೇವೆ. ಆದರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಿರೋದಾಬಾದ್ ಜನರು ವೈದ್ಯಕೀಯ ಸಹಾಯ ಪಡೆಯುವ ಬದಲು ಇಂತಹ ನಂಬಿಕೆಗಳಿಗೆ ಮೊರೆ ಹೋಗುತ್ತಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?
|