ನಂಬಿಕೆಯ ಕುರಿತು ಮಾತು ಬರುವಾಗ ತಮ್ಮ ತಾತ್ವಿಕ ಯೋಚನೆಯನ್ನು ಬದಿಗಿಡಬೇಕಾಗಬಹುದು. ಆದರೆ, ನಾಗ ಮತ್ತು ನಾಗಿನಿಯರ ಆಂತರಿಕ ಪ್ರೇಮ ಹಾಗೂ ಅವುಗಳ ಪವಾಡಸದೃಶ ಶಕ್ತಿಗಳ ಬಗ್ಗೆ, ಅವುಗಳ ನೈಜತೆ ಬಗ್ಗೆ ಮತ್ತು ಇಂದಿನ ಸಮಾಜದಲ್ಲಿ ಅವು ಎಷ್ಟರಮಟ್ಟಿಗೆ ಪ್ರಸ್ತುತ ಎಂಬ ವಿಷಯ ನಿಜಕ್ಕೂ ಗಂಭೀರವಾಗಿ ಚರ್ಚಿಸಬೇಕಾದ ಸಂಗತಿ.
ಇದು ಬರೋಡಾ ನಗರದ ಮಂಜಲಪುರ ಪ್ರದೇಶ. ಇಲ್ಲೊಂದು ಪವಾಡ ನಡೆಯುತ್ತದೆ ಎಂದು ಹೇಳಲಾಗುತ್ತಿರುವ ಮಂದಿರವಿದೆ. ಇದುವರೆಗೆ ನೋಡಿದ ಮಂದಿರಗಳಲ್ಲೇ ಇದು ಅತ್ಯಂತ ವಿಚಿತ್ರವಾದುದು. ಇದುವೇ ನಾಗ ಜೋಡಿಯ ಸಮಾಧಿ. ಇದು ಪ್ರೇಮ ಮತ್ತು ಭಕ್ತಿಯ ಸಂಕೇತ ಎಂದೇ ಜನ ಕರೆಯುತ್ತಾರೆ.
ಮಂದಿರದ ವ್ಯವಸ್ಥಾಪಕ ಹರಮನ್‌ಭಾಯಿ ಸೋಲಂಕಿ ಅವರನ್ನು ನಾವು ಮಾತನಾಡಿಸಿದಾಗ ಆಸಕ್ತಿಕರ ಕಥೆಯೊಂದನ್ನು ನಮ್ಮ ಮುಂದಿಟ್ಟರು. ಅದು 2002ರ ಕಾಲದ ಶ್ರಾವಣ ಮಾಸ. ಯಾವುದೋ ಒಂದು ಪವಿತ್ರ ಕ್ಷೇತ್ರ ಸಂದರ್ಶಿಸಿ ಪಾರೇಖ್ ಕುಟುಂಬ ಮರಳುತ್ತಿತ್ತು. ರಸ್ತೆ ದಾಟುತ್ತಿದ್ದ ನಾಗ ಜೋಡಿಗಳಲ್ಲಿ ಹೆಣ್ಣು ನಾಗವು ಆಕಸ್ಮಿಕವಾಗಿ ಅವರ ಕಾರಿನಡಿಗೆ ಬಿತ್ತು. ನಾಗಿನಿ ಸ್ಥಳದಲ್ಲೇ ಮೃತಪಟ್ಟಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ತನ್ನ ಪ್ರಿಯತಮೆಯು ಕಣ್ಣೆದುರೇ ಸಾವಿಗೀಡಾಗಿದ್ದನ್ನು ಸಹಿಸಲಾರದ ನಾಗ, ಆಕ್ರೋಶದಿಂದ ಹೆಡೆಯೆತ್ತಿ ನೆಲಕ್ಕೆ ಪದೇ ಪದೇ ಕುಕ್ಕುತ್ತಲೇ, ತನ್ನ ಪ್ರಾಣವನ್ನೂ ಕಳೆದುಕೊಂಡಿತು.
ಈ ಘಟನೆ ನೋಡಿದ ಜನ ಸ್ತಂಭೀಭೂತರಾದರು. ಸ್ಥಳದಲ್ಲಿ ಹಾಜರಿದ್ದ ಕೆಲವು ಹಿರಿಯರು, ಇದು ಹಾವುಗಳ ನೈಜ ಪ್ರೇಮದ ಸಂಕೇತವಾಗಿದ್ದು, ಅವುಗಳಿಗೆ ಇಲ್ಲೇ ಒಂದು ಸ್ಮಾರಕ ಕಟ್ಟಿಸುವಂತೆ ಸಲಹೆ ನೀಡಿದರು. ಹೀಗೆ ಸಮಾಧಿ ರೂಪುಗೊಂಡು ಪೂರ್ಣವಾದ ಮರುದಿನವೇ ಆ ಸ್ಥಳದಲ್ಲಿ ಭಾರೀ ಸ್ಫೋಟ ನಡೆದು, ಮಂದಿರವು 2-3 ಅಡಿಗಳಷ್ಟು ಕೆಳಗೆ ಹೋಯಿತು. ಅಂದಿನಿಂದ ಇದೊಂದು ಭಾರೀ ಪವಾಡ ಎಂದೇ ಜನಜನಿತವಾಯಿತು.
ಇಲ್ಲಿ ಹಲವಾರು ಅಚ್ಚರಿಗಳು ಘಟಿಸುತ್ತಲೇ ಇರುತ್ತವೆ ಎನ್ನುತ್ತಾರೆ ಮಂದಿರದ ಅರ್ಚಕರು. ಐದಾರು ವರ್ಷದ ಹಿಂದೆ ನಡೆದ ಘಟನೆಯೊಂದನ್ನು ಅವರು ಉಲ್ಲೇಖಿಸುತ್ತಾರೆ. ಭಕ್ತರೊಬ್ಬರು ಒಂದು ತೆಂಗಿನ ಕಾಯಿಯನ್ನು ಒಡೆದರು. ಆ ಎರಡು ತುಂಡುಗಳಿಂದ ಎರಡು ಸಣ್ಣ ತೆಂಗಿನಕಾಯಿಗಳು ಹೊರಬಂದವಂತೆ. ಅವರು ಮತ್ತೊಂದು ಘಟನೆಯನ್ನೂ ಹೇಳಿದರು. ಭಕ್ತರೊಬ್ಬರು ಒಯ್ಯುತ್ತಿದ್ದ ತೆಂಗಿನ ಕಾಯಿಯಿಂದ ಎರಡು ಕಣ್ಣುಗಳು ಹೊರಬಂದವಂತೆ. ಇದು ನಾಗದೇವತೆಯ ಪವಾಡವೆಂದೇ ನಂಬಿದ ಅವರು, ಈ ಕಾಯಿಯನ್ನು ಪೂಜೆಗಾಗಿ ಮಂದಿರದಲ್ಲೇ ಇರಿಸಿದರು. ತೆಂಗಿನ ಕಾಯಿ ಇರುವ ಸ್ಥಳವಿದು.
ನಾಗ ಮಂದಿರದಲ್ಲಿ ಅದರದ್ದೇ ಆದ ನಂಬಿಕೆಯ ವಾತಾವರಣವೊಂದು ಸೃಷ್ಟಿಯಾಯಿತು ಮತ್ತು ಜನ ದೂರದೂರುಗಳಿಂದ ಇಲ್ಲಿಗೆ ಬರಲಾರಂಭಿಸಿದರು. ವ್ಯವಹಾರದಲ್ಲಿ ಯಶಸ್ಸು, ಸಂಪತ್ಸಮೃದ್ಧಿ ಮತ್ತು ಸಂತಾನಭಾಗ್ಯಕ್ಕಾಗಿ ನಾಗದೇವತೆಯ ಮೊರೆ ಹೋಗಲಾರಂಭಿಸಿದರು.
ಈ ದೇಶದಲ್ಲಿ ನಾವು ಇಂತಹ ಅದೆಷ್ಟೋ ಘಟನೆಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಂಥಹ ಕಥೆಗಳೆಲ್ಲಾ, ವಿಶೇಷವಾಗಿ ನಂಬಿಕೆ, ಧರ್ಮದೊಂದಿಗೆ ಬೆರೆತುಕೊಂಡಿರುವಾಗ ಸತ್ಯಾಂಶವೆಷ್ಟು ಎಂಬುದನ್ನು ಅರಿಯುವುದು ತ್ರಾಸದಾಯಕ ಸಂಗತಿ.
ಕೆಲವರು ಮುಗ್ಧ ಜನರ ಧಾರ್ಮಿಕ ಭಾವನೆಯನ್ನೇ ಬಂಡವಾಳವಾಗಿಟ್ಟುಕೊಂಡು ಹಣ ಮಾಡುತ್ತಿರುವ ಅದೆಷ್ಟೋ ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಹಲವು ಬಾರಿ ಸಾಮಾನ್ಯ ಕಥೆಯೊಂದನ್ನು ಅಸಾಮಾನ್ಯ ಎಂಬಂತೆ ರಂಗು ರಂಗಿನ ಕಥೆ ಕಟ್ಟಿ ಬಿಂಬಿಸಿದ ಉದಾಹರಣೆಗಳೂ ಇವೆ. ಇದು ಅವರವರ ನಂಬಿಕೆಯ ವಿಷಯವೂ ಹೌದು. ನೀವೇನಂತೀರಿ?
|