ಅನಿರುದ್ಧ ಜೋಷಿ ನೀವು ನಂಬುವಿರಾ ಸರಣಿಯಲ್ಲಿ ಈ ವಾರ ನಾವು ನಿಮ್ಮನ್ನು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿರುವ ತಿವಾದಿಯಾ ಎಂಬ ಸಣ್ಣ ಗ್ರಾಮಕ್ಕೆ ಕರೆದೊಯ್ಯುತ್ತೇವೆ. ಈ ಗ್ರಾಮದ ಪ್ರತಿಯೊಬ್ಬರೂ ರಾಮಭಕ್ತರಾಗಿದ್ದು, ಈ ಗ್ರಾಮದಲ್ಲಿ ಪ್ರತಿಯೊಬ್ಬರ ಜೀವನಶೈಲಿಯ ಬದಲಾವಣೆಗೆ ಶ್ರೀರಾಮನೇ ಕಾರಣ ಎಂಬುದು ಈ ಗ್ರಾಮಸ್ಥರ ನಂಬಿಕೆಯಾಗಿದೆ.
ಸುಮಾರು 14 ವರ್ಷಗಳ ಹಿಂದೆ ಈ ಗ್ರಾಮವು ಎಲ್ಲಾ ರೀತಿಯ ರೋಗಗಳಿಗೆ ಹಾಗೂ ಕ್ಷಾಮಕ್ಕೆ ಒಳಗಾಗಿತ್ತು. ಆದರೆ, ಇಲ್ಲಿರುವ ಸಿದ್ಧಿಹನುಮಾನ್ ದೇವಸ್ಥಾನದಲ್ಲಿ ಯಾವಾಗ ಅಖಂಡ ರಾಮಾಯಣ ಪಾರಾಯಣ ಪ್ರಾರಂಭವಾಯಿತೋ ಅಂದಿನಿಂದ ಗ್ರಾಮವು ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಿತು ಎಂಬುದು ಇಲ್ಲಿನ ಜನರ ನಂಬಿಕೆ. ಇದಲ್ಲದೆ ಅಖಂಡ ರಾಮಾಯಣ ಪ್ರವಚನದ ವೇಳೆ ಅಖಂಡ 'ದಿಯಾ' (ದೀಪ) ದರ್ಶನವೂ ಇದೇ ಸಂದರ್ಭ ನಡೆಯುತ್ತದೆ.
ರಾಮಾಯಣದ ಪ್ರವಚನ ಪ್ರಾರಂಭಗೊಂಡಂದಿನಿಂದ ಈ ಗ್ರಾಮದಲ್ಲಿ ಸಂತೋಷ ನೆಲೆಸಲು ಪ್ರಾರಂಭಗೊಂಡಿತು. ಅಖಂಡ ರಾಮಾಯಣ ಪ್ರಾರಂಭಗೊಳ್ಳುವ ಮೊದಲು ಗ್ರಾಮದಲ್ಲಿ ನೀರಿನ ಮಟ್ಟವು ಭೂಮಿಯಾಳದಲ್ಲಿ 300 ಅಡಿಗಳಷ್ಟು ಕೆಳಗಿತ್ತು. ಆದರೆ, ಅಖಂಡ ರಾಮಾಯಣದ ಫಲದಿಂದಾಗಿ, ಇದೀಗ 30ರಿಂದ 40 ಅಡಿಗಳಲ್ಲಿ ನೀರು ಲಭಿಸುತ್ತದೆ, ಇನ್ನೂ ಕೆಲವೆಡೆ ಭೂಮಿಯಾಳದ ಕೇವಲ ಐದೇ ಅಡಿಗಳಲ್ಲೇ ನೀರಿನ ಮೂಲ ದೊರೆತಿದೆ ಎನ್ನುತ್ತಾರೆ ದೇವಾಲಯದ ಪುರೋಹಿತ ಧರ್ಮೇಂದ್ರ ವ್ಯಾಸ್
ಗ್ರಾಮಸ್ಥರೊಬ್ಬರು ಹೇಳುವಂತೆ, ಅಖಂಡ ರಾಮಾಯಣದ ಪ್ರವಚನ ಪ್ರಾರಂಭಗೊಂಡಂದಿನಿಂದ ಗ್ರಾಮದ ಜನತೆ ಅತ್ಯಂತ ಉತ್ಸಾಹ ಹಾಗೂ ಸಂತೋಷದಿಂದಿದ್ದಾರೆ.
ಅಖಂಡ ರಾಮಾಯಣದ ಮಹಾತ್ಮೆಯ ಬಗ್ಗೆ ಧರ್ಮೇಂದ್ರ ವ್ಯಾಸ್ ಹೇಳುವಂತೆ, ಒಮ್ಮೆ ನವರಾತ್ರಿಯಂದು ದೇವಾಲಯದಲ್ಲಿ ರಾಮಾಯಣ ಪ್ರವಚನವು ನಡೆಯುತ್ತಿದ್ದ ವೇಳೆ ದೇವಾಲಯದ ಟೆರೇಸ್‌ನಲ್ಲಿ ಸಿಡಿಲು ಬಡಿದಿತ್ತು. ಆದರೆ, ಈ ಪ್ರವಚನದಲ್ಲಿ ಭಾಗವಹಿಸಿದ್ದ ಯಾರಿಗೂ ಏನೂ ಹಾನಿಯಾಗಿರಲಿಲ್ಲವಂತೆ.
ಇದಲ್ಲದೆ, ಈ ಪ್ರವಚನವು ಪ್ರಾರಂಭಗೊಂಡ ನಂತರ ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿಯೊಬ್ಬ ಗುಣಮುಖನಾಗಿ ಉತ್ತಮ ಜೀವನವನ್ನು ನಡೆಸುತ್ತಿದ್ದಾನಂತೆ. ಅಖಂಡ ರಾಮಾಯಣ ಪ್ರವಚನದಿಂದ ಮಾನಸಿಕ ಅಸ್ವಸ್ಥನೊಬ್ಬ ಗುಣಮುಖ ಹೊಂದುವ ಸಾಧ್ಯತೆಯಿದೆಯೇ? ಅದೇ ರೀತಿ ಪ್ರವಚನದಿಂದಾಗಿ ನೀರಿನ ಮಟ್ಟ ಹೆಚ್ಚಾಯಿತು ಎಂಬ ಗ್ರಾಮಸ್ಥರ ನಂಬಿಕೆಯ ಬಗ್ಗೆ ನೀವೇನಂತೀರಿ?
|