ದೈನಂದಿನ ಬದುಕಿನಲ್ಲಿ ನಾವು ಅದೆಷ್ಟೋ ಮಂದಿಯನ್ನು ನೋಡುತ್ತೇವೆ, ನಮ್ಮ ಕಣ್ಣುಗಳು ಹಲವಾರು ಮುಖಗಳನ್ನು ನೋಡುತ್ತಿರುತ್ತವೆ. ಸುಂದರ ವದನಗಳು, ನಗು ಮುಖಗಳು, ಗಂಟಿಕ್ಕಿದ ಮುಖಗಳು... ಹೀಗೆ... ಮಾತ್ರವಲ್ಲ ದುಂಡು ಮುಖ, ಚೌಕಾಕಾರದ ಮುಖ ಅಥವಾ ಕೋನಾಕಾರದ ಮುಖಗಳನ್ನೂ ನಾವು ಕಾಣಬಹುದು. ಆದರೆ ಈ ಮುಖಗಳು ಏನನ್ನಾದರೂ ಹೇಳುತ್ತವೆಯೇ? ಮುಖವನ್ನು ನೋಡುವುದರಿಂದ ಆ ವ್ಯಕ್ತಿಯ ಗುಣಾವಗುಣಗಳನ್ನು ನಾವು ಹೇಳಬಹುದೇ?
ಇದು ಇಡೀ ವಿಶ್ವವನ್ನು ಕಾಡುತ್ತಿರುವ ಕುತೂಹಲ. 17ನೇ ಶತಮಾನದಲ್ಲಿ ಬದುಕಿದ್ದ, ಚಾರ್ಲ್ಸ್ ಲೀ ಬ್ರುನ್ (1619-1690 ರಲ್ಲಿ ಲೂಯಿಸ್- XIV ದೊರೆಯ ಆಸ್ಥಾನದಲ್ಲಿದ್ದ) ಎಂಬ ಫ್ರೆಂಚ್ ಕಲಾವಿದ ಬಿಡಿಸಿರುವ ಈ ಚಿತ್ರಗಳನ್ನೇ ನೋಡಿ. ಇವುಗಳಿರುವುದು ತಂಜಾವೂರಿನ ಸರಸ್ವತಿ ಮಹಲ್ ಲೈಬ್ರರಿಯಲ್ಲಿ. ಆತ ಕೆಲವೊಂದು ವ್ಯಕ್ತಿಗಳ ಮುಖಗಳನ್ನು ಚಿತ್ರಿಸಿದ್ದು, ಅವುಗಳು ಒಂದು ಕೋನದಲ್ಲಿ ನೋಡಿದರೆ, ಪ್ರಾಣಿಗಳ ಮುಖಗಳನ್ನು ಹೋಲುತ್ತವೆ.
ಆತ ಮಾನವನ ಮುಖಗಳನ್ನು ಮತ್ತು ಅವರ ಗುಣಗಳನ್ನು ಅಧ್ಯಯನ ಮಾಡಿದ್ದಾನೆ. ಒಂದು ಪಕ್ಷಿ ಅಥವಾ ಪ್ರಾಣಿಯ ಮುಖವನ್ನು ಹೋಲುವ ವ್ಯಕ್ತಿಯೊಬ್ಬನ ಮುಖವು, ಆತನಲ್ಲಿರುವ ಆ ಪ್ರಾಣಿ ಅಥವಾ ಪಕ್ಷಿಯ ಗುಣಗಳನ್ನು ಬಿಂಬಿಸುತ್ತವೆ ಎಂಬುದು ಬ್ರುನ್ ಬಲವಾದ ನಂಬಿಕೆ. ಅವರ ಅಧ್ಯಯನ ಮತ್ತು ಸಂಶೋಧನೆಗಳು, ವ್ಯಕ್ತಿಯೊಬ್ಬನ ಮುಖ ನೋಡಿ ಆತನ ಗುಣಾವಗುಣಗಳನ್ನು ತಿಳಿಯಬಲ್ಲ ‘ಮುಖ ಸಾಮುದ್ರಿಕಾ ಶಾಸ್ತ್ರ’ದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿವೆ.
ವ್ಯಕ್ತಿಯೊಬ್ಬನ ಮುಖವು ನಾಯಿ ಮುಖದಂತೆ ಕಂಡುಬಂದರೆ, ನಾವು ಆತನದು ನಾಯಿ ಬುದ್ಧಿ ಅಂತ ತಿಳಿದುಕೊಂಡು, ಆತ ಕಿರುಚಿದರೆ ಅದನ್ನು ನಾಯಿಯ ಬೊಗಳುವಿಕೆಗೆ ಹೋಲಿಸಬಹುದೇ? ಅಥವಾ ನಾಯಿಯ ಅತ್ಯದ್ಭುತ ಗುಣವಾದ ಸ್ವಾಮಿನಿಷ್ಠೆಯು ಆತನಲ್ಲಿ ಮೇಳೈಸಿರುತ್ತದೆ ಎಂದು ಭಾವಿಸಬಹುದೇ? ಇಲ್ಲ. ಈ ರೀತಿ ನಿಖರವಾಗಿ ನಿರ್ಧರಿಸುವುದು ಅವೈಜ್ಞಾನಿಕವಾಗುತ್ತದೆ.
ಆದರೆ ನಮ್ಮ ದೇಶದಲ್ಲಿ ಮುಖ ಸಾಮುದ್ರಿಕಾ ಶಾಸ್ತ್ರ ಎಂಬ ವಿಧಾನದ ಮೂಲಕ ನಾವು ವ್ಯಕ್ತಿಯ ಮುಖ ಓದಿ ಆತನ ಗುಣ-ನಡತೆಗಳನ್ನು ತಿಳಿಯಬಹುದು. ಈ ಸಾಮುದ್ರಿಕಾ ಲಕ್ಷಣ ವಿಧಾನವು ಪುರಾತನ ಕಾಲದಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ. ಜ್ಯೋತಿಷಿಗಳು ಈ ವಿಧಾನ ಬಳಸಿ ವ್ಯಕ್ತಿಯ ಪೂರ್ವಾಪರಗಳನ್ನು ಹಾಗೂ ಜಾತಕವನ್ನೂ ತಯಾರಿಸಬಲ್ಲರಾಗಿದ್ದಾರೆ.
ನಮ್ಮ ಜ್ಯೋತಿಷಿ ಕೆ.ಪಿ.ವಿದ್ಯಾಧರನ್ ಅವರಿಗೆ ಚಾರ್ಲ್ಸ್ ಲೀ ಬ್ರನ್ ಅವರ ಕಲಾಕೃತಿಗಳನ್ನು ತೋರಿಸಿದಾಗ, ಸಾಮುದ್ರಿಕಾ ಲಕ್ಷಣ ಮತ್ತು ಮುಖಸಾಮುದ್ರಿಕಾ ಶಾಸ್ತ್ರವನ್ನು ಅವರು ಹೋಲಿಸಿದ್ದು ಹೀಗೆ:
“ಕೆಲವರು ಆನೆಯಂತೆ ಚಿಕ್ಕ ಕಣ್ಣು ಹೊಂದಿರುತ್ತಾರೆ, ಆದರೆ ಅವರ ದೃಷ್ಟಿ ಕೂಡ ಆನೆಯಷ್ಟೇ ಚುರುಕಾಗಿರುತ್ತದೆ. ಕೆಲವರು ಬೆಕ್ಕಿನ ಕಣ್ಣು ಹೊಂದಿರುವವರೂ ಇರುತ್ತಾರೆ. ಆದರೆ ನಾನು ಇಂಥವರನ್ನು ಗಮನಿಸಿದ್ದೇನೆ, ಅವರು ಪ್ರತಿಯೊಂದರಲ್ಲೂ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಾರೆ ಮತ್ತು ಬೆಕ್ಕಿನಷ್ಟೇ ನಿಖರತೆಯಿಂದ ಅವರು ತಮ್ಮ ಕಾರ್ಯ ಮುಗಿಸಿರುತ್ತಾರೆ.”
ಕೆಲವರ ಮುಖಗಳು ಕುದುರೆಯ ಮುಖವನ್ನು ಹೋಲುತ್ತವೆ. ಇಂಥವರು, ಕುದುರೆಯಂತೆಯೇ, ಯಾವುದೇ ಆಯಾಸವಿಲ್ಲದೆ ಅತ್ತಿತ್ತ ಓಡುತ್ತಾರೆ ಮತ್ತು ಸಾಕಷ್ಟು ಕೆಲಸಗಳನ್ನು ಮಾಡುತ್ತಾರೆ. ಕೆಲವರ ಮುಖಗಳು ಗುಬ್ಬಚ್ಚಿಯ ಮುಖವನ್ನು ಹೋಲುತ್ತದೆ. ಅಂಥವರು ಯಾವತ್ತೂ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ ಮತ್ತು ಭವಿಷ್ಯಕ್ಕೆ ಕೂಡಿಡುವ ಗುಣ ಹೊಂದಿರುತ್ತಾರೆ. ಕಠಿಣ ಪರಿಶ್ರಮ ಮತ್ತು ಉಳಿತಾಯ ಮನೋಭಾವದಿಂದ ಅವರು ತಮ್ಮ ಸಹೋದರಿಯರ ವಿವಾಹ ನೆರವೇರಿಸುತ್ತಾರೆ ಮತ್ತು ನಾವೊಂದು ದೊಡ್ಡ ಹೊಣೆಗಾರಿಕೆಯನ್ನು ನಿಭಾಯಿಸಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಾರೆ.
“ಆದುದರಿಂದ, ನಾನು ನೋಡಿ ಪಡೆದ ಅನುಭವದ ಆಧಾರದಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿಯ ಮುಖದಲ್ಲಿ ಯಾವುದೇ ಒಂದು ಪ್ರಾಣಿ ಅಥವಾ ಪಕ್ಷಿಯ ಮುಖದ ಚರ್ಯೆ ಇದೆ ಎಂದಾದರೆ, ಅವರು ಆಯಾ ಪ್ರಾಣಿ ಯಾ ಪಕ್ಷಿಯ ಗುಣಗಳನ್ನು ಹೊಂದಿರುತ್ತಾರೆ” ಎಂದು ಹೇಳುತ್ತಾರೆ ತಮಿಳು ಜ್ಯೋತಿಷಿ ವಿದ್ಯಾಧರನ್.
ಆದರೆ, ಇದು ನಿಖರ ಜ್ಯೋತಿಷ್ಯ ಎಂದು ನಾವು ಪರಿಗಣಿಸಬಹುದೇ ಎಂಬುದು ಚರ್ಚಾರ್ಹ ಸಂಗತಿ. ವ್ಯಕ್ತಿಯೊಬ್ಬನ ಗುಣಗಳನ್ನು ತಿಳಿಯಬೇಕಿದ್ದರೆ ಆತನ ಮುಖವನ್ನು ಮಾತ್ರವೇ ಅವಲಂಬಿಸುವಂತಿಲ್ಲ. ಈ ಸಂಗತಿಯ ಬಗ್ಗೆ ನಿಮಗೇನನಿಸುತ್ತದೆ? ನಮಗೆ ಬರೆಯಿರಿ.
|