ಏಳು ಕೆಜಿ ತೂಗುವ ಕಲ್ಲಿನ ವಿಗ್ರಹ ನೀರಿನ ಮೇಲೆ ತೇಲಬಲ್ಲದೇ? ಈ ವಿಗ್ರಹದ ಮುಳುಗುವಿಕೆ ಅಥವಾ ತೇಲುವಿಕೆಯು ಆ ಊರಿನ ಮೇಲಿನ ಶುಭಾಶುಭಗಳ ಶಕುನವನ್ನು ನಿರ್ಧರಿಸಬಲ್ಲುದೇ..? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿರುವ ‘ನೀವು ನಂಬುವಿರಾ’ ಬಳಗದೊಂದಿಗೆ ನೀವೂ ಬನ್ನಿ.
ಮಧ್ಯಪ್ರದೇಶದ ದೇವಾಸ್ ಜೆಲ್ಲೆಯಿಂದ 45ಕಿ.ಮೀ ದೂರದಲ್ಲಿರುವ ಸಣ್ಣ ಪಟ್ಟಣ ಹಟ್‌ಪಿಪಿಲಿಯಾ. ಈ ಹಳ್ಳಿಯ ನರಸಿಂಹ ದೇವಾಲಯದ ವಿಗ್ರಹ ಪ್ರತಿವರ್ಷ ನೀರಿನಲ್ಲಿ ತೇಲುತ್ತದೆ. ಆದರೆ ಈ ವಿಸ್ಮಯ ಹೇಗೆ ಘಟಿಸುತ್ತದೆ ಎಂಬುದನ್ನು ನಾವು ನಮ್ಮ ಕ್ಯಾಮೆರದಲ್ಲಿ ಸೆರೆಹಿಡಿದಿದ್ದೇವೆ.
ಪ್ರತಿವರ್ಷ ಡೋಲ್ ಗ್ಯಾರಾಸ್ ಸಂದರ್ಭದಲ್ಲಿ ನರಸಿಂಹ ದೇವರ ವಿಗ್ರಹವನ್ನು ಪೂಜಿಸಿ ನಂತರ ನದಿಯ ನೀರಿನಲ್ಲಿ ಬಿಡಲಾಗುತ್ತದೆ. ಆದರೆ ಆಶ್ಚರ್ಯಕರವಾಗಿ ವಿಗ್ರಹವು ನೀರಿನಲ್ಲಿ ತೇಲುತ್ತದೆ. ಈ ಕ್ಷಣವನ್ನು ತಮ್ಮ ಕಣ್ತುಂಬಿಕೊಳ್ಳಲು ಪ್ರತಿವರ್ಷ ದೊಡ್ಡ ಸಂಖ್ಯೆಯಲ್ಲಿ ಜನ ನೆರೆಯುತ್ತಾರೆ.
ನೀರಿನಲ್ಲಿ ಬಿಟ್ಟಾಗ ವಿಗ್ರಹವು ಒಂದು ಬಾರಿ ತೇಲಿದರೆ, ಮುಂಬರುವ ವರ್ಷದ ನಾಲ್ಕು ತಿಂಗಳುಗಳು ಸಮೃದ್ಧಿಯಿಂದ ಕೂಡಿರುತ್ತದೆ ಎಂದು ಸೂಚಿಸುತ್ತದೆ. ಇದೇ ರೀತಿ ವಿಗ್ರಹವು ಮೂರು ಬಾರಿ ನೀರಿನಲ್ಲಿ ತೇಲಿದರೆ ಪೂರ್ಣ ವರ್ಷ ಸಮೃದ್ಧವಾಗಿರುತ್ತದೆ ಎಂಬುದಾಗಿ ಇದರ ಅರ್ಥ ಎಂದು ದೇವಾಲಯದ ಮುಖ್ಯ ಅರ್ಚಕರಾದ ಗೋಪಾಲ ವೈಷ್ಣವ ಹೇಳುತ್ತಾರೆ.
ಗ್ರಾಮದ ನಿವಾಸಿಯಾದ ಸೋಹನ್ ಲಾಲ್ ತಾವು ಕಳೆದ 20-25 ವರ್ಷಗಳಿಂದ ಈ ಘಟನೆಗೆ ಸಾಕ್ಷಿಯಾಗಿರುವುದಾಗಿ ತಿಳಿಸಿದರು. ಗ್ರಾಮವಾಸಿಗಳಿಗೆ ನರಸಿಂಹ ವಿಗ್ರಹದ ಮೇಲೆ ಅದಮ್ಯ ನಂಬಿಕೆ ಇರುವುದಾಗಿ ಅವರು ಹೇಳಿದರು.
ದೇವಾಲಯದ ಇನ್ನೋರ್ವ ಪೂಜಾರಿಯವರೂ ಸಹ ತಾವು ದೇವರ ಮಹಿಮೆಗೆ ಪ್ರತ್ಯಕ್ಷದರ್ಶಿಯಾಗಿರುವುದಾಗಿ ಹೇಳುತ್ತಾರೆ. ದೇವಾಲಯದ ಪೂಜಾರಿಗಳಾದ ನಾವು ಸ್ವತಃ ದೇವರ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುತ್ತೇವೆ. ಆದರೆ ವಿಸ್ಮಯಕಾರಿಯಾಗಿ ವಿಗ್ರಹ ಮೇಲೆದ್ದು ಬರುತ್ತದೆ ಎಂದು ಅವರು ಹೇಳುತ್ತಾರೆ. ವಿಗ್ರಹವನ್ನು ವರ್ಷದಲ್ಲಿ ಕೇವಲ ಮೂರು ಬಾರಿಯಷ್ಟೇ ನದಿಯಲ್ಲಿ ಬಿಡಲಾಗುತ್ತದೆ. ಕಳೆದ ವರ್ಷ ವಿಗ್ರಹ ಎರಡು ಬಾರಿ ತೇಲಿತ್ತು, ಆದರೆ ಈ ವರ್ಷ ಕೇವಲ ಒಂದು ಬಾರಿ ಮಾತ್ರ ತೇಲಿದೆ.
ಬೇಸಿಗೆಯ ಕಾಲ ನದಿಯ ನೀರು ಬತ್ತಿ ಹೋಗಿದ್ದರೂ ಡೋಲ್ ಗ್ಯಾರಾಸ್ ಸಂದರ್ಭ ಮಳೆ ಬಂದು ನದಿ ತುಂಬುತ್ತದೆ ಎಂದು ಗ್ರಾಮ ನಿವಾಸಿಗಳು ನಂಬುತ್ತಾರೆ.
ವಿಗ್ರಹವು ನೀರಿನಲ್ಲಿ ತೇಲಲು ಕಾರಣವೇನು? ಇದು ವಿಗ್ರಹದ ಕಲ್ಲಿನ ಗುಣವೇ ಅಥವಾ ಇದು ನಿಜವಾಗಿಯೂ ದೇವರ ಮಹಿಮೆಯೇ? ಈ ಬಗ್ಗೆ ನಿಮಗೇನನ್ನಿಸುತ್ತದೆ. ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ...
|