( ವೆಬ್‌ದುನಿಯಾ ಡೆಸ್ಕ್‌ನಿಂದ) ಬೇರಾವುದೇ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಜನ ಹರಕೆ ಹೊರುವುದರಲ್ಲಿ ನಿಷ್ಣಾತರು. ತಮ್ಮ ಆಶಯ ಈಡೇರುವುದಕ್ಕೆ ಅವರು ಏನು ಮಾಡಲೂ ಸಿದ್ಧವಾಗಿರುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಮಧ್ಯಪ್ರದೇಶದ ಬುರ್ಹಾನ್‌ಪುರದ ಉಟಾವಳೀ ನದೀ ತೀರದಲ್ಲಿರುವ ನಾಗಮಂದಿರ. ಇಲ್ಲಿ ಅದೆಷ್ಟೋ ಮಂದಿ ತಮ್ಮ ಅಭೀಷ್ಟ ಈಡೇರುವುದಕ್ಕಾಗಿ ಹರಕೆ ಹೊರುತ್ತಾರೆ. ತಮ್ಮ ಕನಸು ಕೈಗೂಡಿದ ಬಳಿಕ ಅವರು ಒಂದು ಜೋಡಿ ಹಾವುಗಳನ್ನು ಇಲ್ಲಿಗೆ ಒಪ್ಪಿಸುತ್ತಾರೆ.ಈ ನದಿ ಇರುವುದು ಪಟ್ಟಣದ ಪಾರ್ಶ್ವದಲ್ಲೇ. ನದಿ ಸಮೀಪವಿರುವ ಮಂದಿರವು ಅಡ್ವಾಳ್ ಕುಟುಂಬಕ್ಕೆ ಸೇರಿದೆ. ಋಷಿ ಪಂಚಮಿಯ ದಿನ, ಅಂದರೆ ಗಣೇಶ ಚತುರ್ಥಿಯ ಮರುದಿನ, ಈ ತಾಣಕ್ಕೆ ಜನರು ಹಿಂಡು ಹಿಂಡಾಗಿ ಬರುತ್ತಾರೆ. ಕೆಲವು ಮಂದಿ ಹರಕೆ ಹೊರಲು ಇಲ್ಲಿಗೆ ಬಂದರೆ, ಇನ್ನು ಕೆಲವರು ಹರಕೆ ತೀರಿಸಲು ಬರುತ್ತಿರುತ್ತಾರೆ.ಉದ್ಯೋಗ, ಸಮೃದ್ಧಿ, ವ್ಯವಹಾರದಲ್ಲಿ ಯಶಸ್ಸು ಕೋರಿ ಜನ ಇಲ್ಲಿಗೆ ಬರುತ್ತಿರುತ್ತಾರೆ. ಸಂತಾನ ಭಾಗ್ಯಕ್ಕೆ, ಮಾನಸಿಕ ಸಮಸ್ಯೆಗಳಿಗೂ ಅಥವಾ ಯಾವುದೇ ದೈಹಿಕ ಸಮಸ್ಯೆಗಳಿಗೂ ಜನ ಇಲ್ಲಿ ಹರಕೆ ಸಲ್ಲಿಸುತ್ತಾರೆ. ತಮ್ಮ ಬಯಕೆ ಈಡೇರಿದ ತಕ್ಷಣ ಅವರು ಆ ದಿನ ಒಂದು ಜೋಡಿ ಹಾವುಗಳೊಂದಿಗೆ ಈ ಮಂದಿರಕ್ಕೆ ಬರುತ್ತಾರೆ. ಈ ಜೋಡಿ ಹಾವುಗಳನ್ನು ಮಂದಿರದ ಸುತ್ತಮುತ್ತಲಿರುವ ನಿವಾಸಿಗಳಿಂದಲೇ ಅವರು ಖರೀದಿಸುತ್ತಾರೆ. ಕಳೆದ 25 ವರ್ಷಗಳಿಂದಲೂ ತಾನು ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ನಾಗ ಜೋಡಿಗಳನ್ನು ಮಂದಿರಕ್ಕೆ ಒಪ್ಪಿಸುತ್ತಿದ್ದೇನೆ. ನಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಿವೆ ಎನ್ನುತ್ತಾರೆ ಮಂದಿರದ ಭಕ್ತ ದಿಲೀಪ್ ಯಾದವ್.ಹಳೆಯ ಒಂದು ಕಥೆಯ ಪ್ರಕಾರ, ಅದೊಮ್ಮೆ ಸೈನಿಕ ಗಡಣವೊಂದು ಕುದುರೆಯ ಮೇಲೇರಿ ಕಾಡಿನ ಮಾರ್ಗದಲ್ಲಿ ಪ್ರಯಾಣಿಸುತ್ತಿತ್ತು. ಮುಳ್ಳುಗಳಿಂದ ಆವೃತವಾಗಿದ್ದ ಹಾವೊಂದು ಮಾನವ ರೂಪ ತಾಳಿ, ರಕ್ಷಿಸುವಂತೆ ಅವರ ಸಹಾಯ ಯಾಚಿಸಿತು. ಸೈನಿಕರು ಮುಳ್ಳುಗಳನ್ನೆಲ್ಲಾ ಬಿಡಿಸಿ ಆ ಹಾವನ್ನು ರಕ್ಷಿಸಿದರು. ಅಂದಿನಿಂದ ನಾಗದೇವತೆಯು ಅವರನ್ನು ಹರಸಿ, ಈ ಮಂದಿರಕ್ಕೆ ಹರಕೆ ಹೊತ್ತು ಯಾರೇ ಬಂದರೂ, ಅವರ ಇಷ್ಟಾರ್ಥ ನೆರವೇರುತ್ತದೆ ಎಂದು ವರ ನೀಡಿತು. ಅಂದಿನಿಂದ ಅಡ್ವಾಳ್ ಕುಟುಂಬವು ಅಡ್ವಾಳ್ ನಾಗಮಂದಿರದ ಉಸ್ತುವಾರಿ ವಹಿಸಿಕೊಂಡು ಬರುತ್ತಿದೆ. ಇದಕ್ಕಾಗಿಯೇ ಅವರಿಗೆ ನಾಗಮಂತ್ರಿ ಎಂದೇ ಹೆಸರು. ದೇಶದ ಉದ್ದಗಲದಿಂದ ಜನರು ಇಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲು ಬರುತ್ತಾರೆ ಎನ್ನುತ್ತಾರೆ ಅಡ್ವಾಳ್ ಕುಟುಂಬದ ಅನಿಲ್ ಭಾವಸಾಗರ್.ಈ ಪದ್ಧತಿಯು ಪ್ರಾರ್ಥನೆ, ನಂಬಿಕೆಗಳಿಗೆ ಮಾತ್ರ ಸೀಮಿತವಾಗಿದ್ದರೆ ಯಾರಿಗೂ ಯಾವುದೇ ತೊಂದರೆ ಇಲ್ಲ. ಆದರೆ, ಬಡಪಾಯಿ ಪ್ರಾಣಿಗಳಿಗೆ ಇದರಿಂದ ತೊಂದರೆಯಾಗುತ್ತದೆ ಎಂಬಂತಿದ್ದರೆ ಖಂಡಿತಾ ಇದು ಸಾಧುವಲ್ಲ. ಋಷಿ ಪಂಚಮಿಯ ಹಿಂದಿನ ದಿನ ಹಾವಾಡಿಗರು ಈ ಹಾವುಗಳನ್ನು ಹಿಡಿದು ಅತ್ಯಂತ ದಯನೀಯ ಸ್ಥಿತಿಯಲ್ಲಿ ಇಟ್ಟಿರುತ್ತಾರೆ. ಹಾಗಿದ್ದರೆ, ನಂಬಿಕೆಯ ಹೆಸರಿನಲ್ಲಿ ಮೂಕ ಪ್ರಾಣಿಗಳಿಗೆ ಈ ಸ್ಥಿತಿ ತರುವುದು ಒಳ್ಳೆಯದೇ? ನೀವೇನು ಹೇಳುತ್ತೀರಿ?
|
| ಸಂಬಂಧಿತ ಮಾಹಿತಿ ಹುಡುಕಿ |
|
|