ನಿಶಾಂತ್ ರಾಜ್ ಎಂ.
ಕೇರಳ ಸಾಂಸ್ಕೃತಿಕ ಪರಂಪರೆಯ ಶ್ರೀಮಂತ ನಾಡು. ತೆಯ್ಯಂ ಇಲ್ಲಿನ ಭೂತಾರಾಧನೆ. ಇದನ್ನು ತೆಯ್ಯಾಟ್ಟಂ ಎಂದೂ ಕರೆಯುತ್ತಾರೆ. ದೈವ ಶಬ್ದದ ಮಲಯಾಳಂ ರೂಪವೇ ತೆಯ್ಯಂ.
ತೆಯ್ಯಂ ಮೂಲತಃ ಇಲ್ಲಿನ ಮೂಲ ನಿವಾಸಿ ಮತ್ತು ಆದಿವಾಸಿ ಬುಡಕಟ್ಟುಗಳ ಆರಾಧನಾ ಸಂಪ್ರದಾಯ. ಕಾಲಾಂತರದಲ್ಲಿ ಅದು ಮುಂದುವರಿದ ಜನಾಂಗಗಳ ಜೊತೆಗಿನ ಕೊಡು ಕೊಳ್ಳುವಿಕೆಯಿಂದ ಎಲ್ಲ ದೈವ-ದೇವರು, ನಂಬಿಕೆ, ಪುರಾಣ, ಆಚರಣೆ ಮಿಶ್ರಣಗೊಂಡು, ಆರಾಧನಾ ಪ್ರಕ್ರಿಯೆಯ ಜೊತೆಗೆ ಅದು ಕಲಾರೂಪವಾಗಿ ಬೆಳೆಯಿತು. ಮಾತೃದೇವತೆ, ಹುತಾತ್ಮ ವೀರರು ಹೀಗೆ ಹಲವು ವಿಧದಲ್ಲಿ ತೆಯ್ಯಂ ಸಾಮ್ರಾಜ್ಯ ಬೆಳೆಯುತ್ತದೆ. ಆ ನೆಲೆಯಲ್ಲಿ ಕಾಸರಗೋಡು ಯಕ್ಷಗಾನ, ಬೊಂಬೆಯಾಟ ಮತ್ತು ತೆಯ್ಯಂ (ಭೂತದ ಕೋಲ) ಎಂಬ ಕಲೆಗಳಿಂದ ಪ್ರಸಿದ್ಧಿ ಪಡೆದ ನಾಡಾಗಿದೆ. 'ಒಪ್ಪನ' ಮತ್ತು 'ಪುಲಿಕಳಿ' (ಹುಲಿವೇಷ) ಇಲ್ಲಿನ ಸಾಂಪ್ರದಾಯಿಕ ಕಲೆಯಾಗಿದ್ದು, ಉತ್ಸವ ಮತ್ತು ಸಮಾರಂಭಗಳಿಗೆ ಮೆರುಗನ್ನು ನೀಡುತ್ತಿದೆ.
ತೆಯ್ಯಂ ಅಥವಾ ತೆಯ್ಯಾಟ್ಟಂ ಮುಖ್ಯವಾಗಿ ಉತ್ತರ ಕೇರಳದ ಅಸಾಧಾರಣ ಮತ್ತು ಪ್ರಸಿದ್ಧಿ ಹೊಂದಿದ ಧಾರ್ಮಿಕ ಕಲೆ. ನೂರಾರು ವರ್ಷಗಳ ಹಳೆಯ ಸಂಪ್ರದಾಯವನ್ನು ಹೊಂದಿರುವ ಈ ಧಾರ್ಮಿಕ ಕಲೆಯು ಪ್ರಸ್ತುತ ಕಣ್ಣೂರು ಜಿಲ್ಲೆಯ ಸಾಂಪ್ರದಾಯಿಕ ಕೊಳತ್ತುನಾಡು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ತೆಯ್ಯಂ ಆರಾಧನಾ ಪದ್ಧತಿಯು ದೇವಸ್ಥಾನಗಳಲ್ಲಿ ದೇವರ ಪೂಜೆಗಿಂತ ಭಿನ್ನವಾಗಿದೆ. ಅದು ನೃತ್ಯ ಮತ್ತು ಸಂಗೀತದ ಅಪೂರ್ವ ಸಂಯೋಗವಾಗಿದೆ.
ತೆಯ್ಯಂ ಕುರಿತಾಗಿನ ಹೆಚ್ಚಿನ ಮಾಹಿತಿಗಳನ್ನು ಕೇರಳಿಗರ ಪ್ರಸಿದ್ಧ ಐತಿಹಾಸಿಕ ಪುಸ್ತಕವಾದ 'ಕೇರಳೋಪತಿ' ಯಲ್ಲಿ ವಿವರಿಸಲಾಗಿದೆ.
ಭಗವಾನ್ ಪರಶುರಾಮನು 'ಕಳಿಯಾಟಂ' ದಂತಹ ಉತ್ಸವಗಳ ಜನಕ ಎಂಬುದು ಇತಿಹಾಸ. ತೆಯ್ಯಂ ಅಥವಾ ತೆಯ್ಯಾಟ್ಟಂ ಎಂದು ಪರ್ಯಾಯ ಹೆಸರನ್ನು ಹೊಂದಿರುವ 'ಕಳಿಯಾಟ್ಟಂ' 3 ದಿನಗಳಿಂದ ಹಿಡಿದು 11 ದಿವಸಗಳ ವರೆಗೆ ಆಚರಿಸಲಾಗುತ್ತದೆ. ತೆಯ್ಯಂ ನೃತ್ಯದ ಹೊಣೆಗಾರಿಕೆಯನ್ನು ಇಲ್ಲಿನ ಪ್ರತ್ಯೇಕ ಪಾನನ್, ವೇಲನ್ ಮತ್ತು ಮಲಯನ್ ಸಮುದಾಯಕ್ಕೆ ವಹಿಸಿಕೊಟ್ಟವನು ಪರಶುರಾಮ ಎಂದು ಪುರಾಣದಲ್ಲಿ ಉಲ್ಲೇಖಿತವಾಗಿದೆ. ಸಂಗಂ ಸಾಹಿತ್ಯದಲ್ಲಿ ತೆಯ್ಯಂ ನೃತ್ಯಗಾರರಾದ ವೇಲನ್ ಕುರಿತಾಗಿನ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಸಂಗಂ ಸಾಹಿತ್ಯದಲ್ಲಿ ಉಲ್ಲೇಖಿಸಿದ್ದು, ಅದರಲ್ಲಿರುವ ಹೇಳಿಕೆಗಳನ್ನು ವೇಲನ್ ಮತ್ತು ಇತರ ಸಮುದಾಯವು ಆಚರಿಸುತ್ತಿತ್ತು.
ಪ್ರಸ್ತುತ ತೆಯ್ಯಂ ಪದ್ಧತಿಯಲ್ಲಿ, ವೇಲನ್ ಸಮುದಾಯದ ನೃತ್ಯವು ನೂತನ ಮಾದರಿಯಾಗಿದೆ. ಇದೀಗ ಈ ಮಾದರಿಯನ್ನು ಈಗಿನ ಕಾಲಕ್ಕನುಗುಣವಾಗಿ ಬದಲಾಯಿಸುವ ಸಂಗಂ ಸಂಪ್ರದಾಯವು ಉತ್ತರ ಕೇರಳದಲ್ಲಿ 'ತೆಯ್ಯಂ' ಅಥವಾ ಭೂತಾರಾಧನೆಯ ಪ್ರಮುಖ ಪದ್ಧತಿಯಾಗಿ ಬೆಳೆದು ಬಂದಿದೆ.
ಧಾರ್ಮಿಕ ಮತ್ತು ಸಾಮಾಜಿಕ ಸ್ಥಾನವನ್ನು ಹೊಂದಿರುವ ಈ ಆರಾಧನೆಯು ಈ ಪ್ರದೇಶದ ಐತಿಹಾಸಿಕ ಸ್ಥಾನಮಾನದ ಕುರುಹಾಗಿದೆ.
ಆರ್ಯನ್ ಸಂಸ್ಕೃತಿಯ ಅಪಾರ ಪ್ರಭಾವದ ನಂತರದಲ್ಲಿ, ತೈಯ್ಯಂ ಪದ್ಧತಿಯು ತನ್ನದೇ ಬುಡಕಟ್ಟಿನ ವಿಶೇಷ ಲಕ್ಷಣಗಳೊಂದಿಗೆ ಹೊಸ ಧೋರಣೆ ಮತ್ತು ಉಪಪದ್ಧತಿಗಳೊಂದಿಗೆ ಮಾರ್ಪಾಟು ಹೊಂದಿದೆ.
|