ತೆಯ್ಯಂ ಆಚರಣೆಯಲ್ಲಿ ಮಾತೃ ದೇವತೆ ಉನ್ನತವಾದ ಸ್ಥಾನವನ್ನು ಪಡೆದಿದ್ದಾಳೆ. ಅತಿಮಾನುಷ ಚೇತನ ಆರಾಧನೆ (spirit worship), ವೀರರ ಆರಾಧನೆ, ಮರಗಳ ಆರಾಧನೆ, ಪೂರ್ವಜರ ಆರಾಧನೆ, ನಾಗಾರಾಧನೆ, ರೋಗನಿವಾರಕ ದೇವಾರಾಧನೆ ಮತ್ತು ಗ್ರಾಮದೇವತೆಗಳ ಆರಾಧನೆಯು ಭೂತಾರಾಧನೆ ಪದ್ಧತಿಯ ವಿವಿಧ ಕವಲುಗಳು.
ಕಾಲಾಂತರದಲ್ಲಿ ಆರ್ಯನ್ ಪುರಾಣ ಮತ್ತು ಇತಿಹಾಸದ ಪ್ರಾಬಲ್ಯದಿಂದಾಗಿ ಅನೇಕ ಬ್ರಾಹ್ಮಣ ದೇವ-ದೇವತೆಗಳು ತೆಯ್ಯಂಗಳಾಗಿ ರೂಪಾಂತರವಾಗಿವೆ ಎಂಬ ನಂಬಿಕೆ. ಈ ದೇವ-ದೇವತೆಗಳೊಂದಿಗೆ ಅಸಂಖ್ಯಾತ ಜಾನಪದ ದೇವತೆಗಳು(Folk God) ಹುಟ್ಟಿಕೊಂಡವು. ಹೀಗೆ ರೂಪು ತಾಳಿದ ದೇವತೆಗಳನ್ನು ಹೆಚ್ಚಾಗಿ 'ಭಗವತಿ' ಎಂಬ ಹೆಸರಿನಲ್ಲಿ ಗುರುತಿಸುತ್ತಾರೆ.
ಬೌದ್ಧ, ಜೈನ ಮತ್ತು ಬ್ರಾಹ್ಮಣರ ಪ್ರಭಾವದಿಂದಾಗಿ ಅನೇಕ ಕೇಂದ್ರಗಳಲ್ಲಿ ದೇವ-ದೇವತೆಗಳಿಗೆ ಪ್ರಾಣಿ ಬಲಿ ನೀಡುವುದನ್ನು ತಡೆಗಟ್ಟಲಾಗಿದೆ. ಆದರೆ ಇಂತಹ ಪದ್ಧತಿಗಳನ್ನು ಈಗಲೂ ಆಚರಿಸುತ್ತಿರುವ ಕೆಲವು ದೇವಸ್ಥಾನಗಳು ಇಂತಹ ಬಲಿ ಪದ್ಧತಿಗೆ ಒಳಾವರಣವನ್ನು ಉಪಯೋಗಿಸದೆ ಪ್ರತ್ಯೇಕವಾಗಿ ದೇವಸ್ಥಾನಗಳ ಹೊರಭಾಗಕ್ಕೆ ವರ್ಗಾಯಿಸಲಾಗಿದೆ.
ಕೋಳಿ ಬಲಿ ಹರಕೆಯು ಭೂತಾರಾಧನೆಯ ಪ್ರಮುಖ ಅಂಗ. ಅನೇಕ ವರ್ಷಗಳು ನಡೆಯದ ಕಾರ್ಯವು ಭೂತ-ದೇವತೆಗಳಿಗೆ ಕೋಳಿ ಬಲಿಹರಕೆಯೊಂದಿಗೆ ಸಿದ್ಧಿಸಿದರೆ, ಭೂತಾರಾಧನೆ ವೇಳೆ ಕೋಳಿಗಳನ್ನು ನೀಡುವುದು ಶತಮಾನಗಳಿಂದ ಬಂದಂತಹ ವಾಡಿಕೆ. ಈ ಪದ್ಧತಿಯನ್ನು ಆಚರಿಸುವುದರಿಂದ ಭೂತ-ದೇವತೆಗಳು ಪ್ರಸನ್ನಗೊಳ್ಳುತ್ತಾರೆ ಎಂಬುದು ನಂಬಿಕೆ. ಆದರೆ ಇಂತಹ ವಿಧಿವಿಧಾನವನ್ನು ದೇವಸ್ಥಾನಗಳ ಗರ್ಭ ಗುಡಿಯ ಗೋಡೆಯ ಹೊರಭಾಗದಲ್ಲಿ ಕೈಗೊಳ್ಳಲಾಗುತ್ತದೆ.
ಕಾಲಾಂತರದಲ್ಲಿ ಕೇರಳದಲ್ಲಿ ವೈಷ್ಣವ ಧರ್ಮವು ಹುಟ್ಟಿದ್ದು, ತೆಯ್ಯಂ ಪದ್ಧತಿಯ ಮೇಲೆ ಯಾವುದೇ ವಿಸ್ತಾರವಾದ ಪ್ರಭಾವ ಬೀರಲಿಲ್ಲ. ಇಂತಹ ವಿಶಿಷ್ಟ ರೀತಿಯನ್ನು ಕೇವಲ ಕೆಲವೇ ದೇವಾರಾಧನೆಯಲ್ಲಿ ಅನುಸರಿಸಲಾಗುತ್ತದೆ. ಈ ಮಾದರಿಯ ಪದ್ಧತಿಯನ್ನು ಆಚರಿಸುವ ಪ್ರಮುಖ ಎರಡು ವೈಷ್ಣವ ತೆಯ್ಯೆಂಗಳೆಂದರೆ 'ವಿಷ್ಣುಮೂರ್ತಿ' ಮತ್ತು 'ದೈವಥಾರ್'.
ರಕ್ತೇಶ್ವರಿ, ಚಾಮುಂಡಿ, ಸೋಮೇಶ್ವರಿ, ಕೊರತಿ ಮತ್ತು ವಿಷ್ಣುಮೂರ್ತಿಯಂತಹ ದೇವತೆಗಳನ್ನು ಕೌಟುಂಬಿಕ ದೇವರುಗಳನ್ನಾಗಿ ವಿಂಗಡಿಸಲಾಗಿದೆ. ಕುಟುಂಬ ದೇವಸ್ಥಾನಗಳಲ್ಲಿ ಆಚರಿಸುವ ಧಾರ್ಮಿಕ ವಿಧಿವಿಧಾನವು ಬ್ರಾಹ್ಮಣ ದೇವಸ್ಥಾನಗಳಿಗಿಂತ ಭಿನ್ನವಾಗಿರುತ್ತದೆ. ಬಹಳ ಮುಖ್ಯವಾದ ವಿಷಯವೆಂದರೆ ಈ ಭೂತಾರಾಧನೆ ಪದ್ಧತಿಗೆ ಇಸ್ಲಾಂ ಅನುಯಾಯಿಗಳೂ ಕೈಜೋಡಿಸುತ್ತಾರೆ. 'ಮಾಪಿಳ್ಳ' ಪಾತ್ರವಾದ ಆಲಿ ಚಾಮುಂಡಿಯೂ ಈ ಪದ್ಧತಿಯಲ್ಲಿ ಒಳಗೊಂಡಿದೆ. ಆಲಿ ಚಾಮುಂಡಿ ದೇವಸ್ಥಾನದ ಆಲಿ ಚಾಮುಂಡಿ ಆರಾಧನೆಯು ಕಾಸರಗೋಡಿನ ಕುಂಬಳೆ ಎಂಬಲ್ಲಿ ಜನಪ್ರಿಯವಾಗಿದೆ.
ಕೆಳವರ್ಗಗಳಿಂದ ಹಿಡಿದು ಬ್ರಾಹ್ಮಣರವರೆಗೆ, ಸಮಾಜದ ಎಲ್ಲ ವರ್ಗದ ಜನರೂ ತೆಯ್ಯಂ ಆರಾಧನೆಗಳಲ್ಲಿ ಭಾಗವಹಿಸುತ್ತಾರೆ. ಇದೊಂದು ಸಾಮೂಹಿಕ ಆರಾಧನೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ತೆಯ್ಯಂ ನೃತ್ಯವನ್ನು ಸಾಮಾನ್ಯವಾಗಿ ಗ್ರಾಮೀಣ ದೇವಸ್ಥಾನಗಳಲ್ಲಿ ಮತ್ತು ಕೌಟುಂಬಿಕ ದೇವಸ್ಥಾನಗಳಲ್ಲಿ ಹಳೆಯ ಕಾಲದಿಂದಲೂ ನಮ್ಮ ಪೂರ್ವಜರು ಆಚರಿಸುತ್ತಾ ಬರುತ್ತಿದ್ದಾರೆ.
ತನ್ನದೇ ಆದ ವ್ಯವಸ್ಥೆ ಮತ್ತು ಪ್ರಾಮುಖ್ಯತೆಗಳೊಂದಿಗೆ ದೈವಸ್ಥಾನಗಳಲ್ಲಿ ಪ್ರತ್ಯೇಕ ದೇವತೆಯ ನೃತ್ಯವು 12ರಿಂದ 24 ತಾಸುಗಳವರೆ ಅಲ್ಪ ಬಿಡುವಿನೊಂದಿಗೆ ಜರುಗುತ್ತದೆ. ದೈವಸ್ಥಾನದ ಗರ್ಭಗುಡಿಯಲ್ಲಿರುವ ಕೇಂದ್ರ ದೇವತೆಯನ್ನು ಪ್ರಸನ್ನಗೊಳಿಸುವ ಮುಖ್ಯ ನೃತ್ಯಗಾರನು ಒಂದು ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುತ್ತಾನೆ. ಅದಕ್ಕೆ 'ಅಣಿಯರ' ಎಂದು ಕರೆಯುತ್ತಾರೆ. ಧಾರ್ಮಿಕ ವಿಧಿವಿಧಾನಗಳ ಅಂಗವಾಗಿ ಮುಖ್ಯ ವೇಷಧಾರಿಯು ಸಸ್ಯಹಾರ ಮತ್ತು ಉಪವಾಸ ವ್ರತವನ್ನು ಅನುಸರಿಸಲೇಬೇಕು. ಸೂರ್ಯಾಸ್ತಮಾನದ ನಂತರ ನೃತ್ಯಗಾರನು ಏನನ್ನೂ ಸೇವಿಸುವುದಿಲ್ಲ.
|