ಅವನ ಮುಖವರ್ಣಿಕೆ ಸೇರಿದಂತೆ ವೇಷಭೂಷಣವನ್ನು ಈ ಕಲೆಯಲ್ಲಿ ನುರಿತವರು ಕಟ್ಟುತ್ತಾರೆ. ಈ ಪದ್ಧತಿಯ ಮೊದಲ ಆಚರಣೆಯನ್ನು 'ಥೊಟ್ಟಂ' ಅಥವಾ 'ವೆಳ್ಳಾಟಂ' ಎಂದು ಕರೆಯುತ್ತಾರೆ. ಮೊದಲ ಹಂತದ ಆಚರಣೆ ಸಂದರ್ಭದಲ್ಲಿ ನೃತ್ಯಗಾರನು ಕೆಂಪು ವಸ್ತ್ರವನ್ನು ಧರಿಸುತ್ತಾನೆಯೇ ವಿನಹ ಯಾವುದೇ ವೇಷಭೂಷಣಗಳಿಂದ ಅಲಂಕೃತನಾಗಿರುವುದಿಲ್ಲ.
ತೆಯ್ಯಂ ಆಡುವವರು, ಕೋಲ ಕಟ್ಟುವವರು ಬುಡಕಟ್ಟು ಜನಾಂಗದವರೇ ಆಗಿರುತ್ತಾರೆ. ಆರಾಧನೆಯ ಕೆಲವು ಘಟ್ಟಗಳು ಮಾತ್ರ ಹಗಲಿನಲ್ಲಿ ನಡೆದು, ಪ್ರಧಾನ ಅಂಶಗಳೆಲ್ಲವೂ ರಾತ್ರಿ ಹೊತ್ತಿನಲ್ಲಿ ನಡೆಯುತ್ತದೆ. ಚೆಂಡೆ, ಡಮರು, ದುಡಿ ವಿವಿಧ ಹಿಮ್ಮೇಳಗಳೊಂದಿಗೆ ದೈವವನ್ನು ಆವಾಹಿಸುವ ಹಾಡನ್ನು ಮೊದಲು ಹಾಡುತ್ತಾರೆ. ಆಗಲೇ ತೆಯ್ಯಂ ಕೋಲಕಟ್ಟಿದ ಪಾತ್ರಿಯಲ್ಲಿ ಶಕ್ತಿಯು ಆವಾಹಿತವಾಗುತ್ತದೆ. ಆವೇಶದ ನಂತರ ಹಾಡುಗಾರರು ಆ ತೆಯ್ಯಂನ ಇತಿಹಾಸ ಪುರಾಣ, ಪರಾಕ್ರಮಗಳನ್ನು ವರ್ಣಿಸುವ ತೊಟ್ಟಂಪಾಟ್ಟ್‌ನ್ನು ಹಾಡುತ್ತಾರೆ. ಪಾತ್ರಿ ಆವೇಶ ಏರಿದಂತೆ ಕಥೆಯನ್ನು ಅಭಿನಯಿಸಲು ತೊಡಗುತ್ತಾನೆ. ಆಗ ಕತ್ತಿವರಸೆ, ಬೆಂಕಿಯ ಆಟ ಮೊದಲಾದವುಗಳ ಮೂಲಕ ದೈವ ತನ್ನ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುತ್ತದೆ. ತೆಯ್ಯಂನ ಪ್ರಧಾನ ಆಕರ್ಷಣೆ ಇರುವುದು ಅವುಗಳ ವೇಷ ಭೂಷಣಗಳಲ್ಲಿ.
ತೆಯ್ಯಂ ನೃತ್ಯವು ಅನೇಕ ಪ್ರಕಾರಗಳನ್ನು ಹೊಂದಿದ್ದು, ಇದನ್ನು 'ಕಳಸಂ' ಎಂದು ಕರೆಯುತ್ತಾರೆ. ಪ್ರತಿ ಕಳಸವನ್ನು ನೃತ್ಯಗಾರನು ಹಂತಹಂತವಾಗಿ ಅಭಿನಯಿಸುತ್ತಾನೆ. ವೆಣ್ಣಾನ್, ಮಲಯನ್, ವೇಲನ್, ಮಾವಿಲನ್, ಪುಲಯನ್ ಮತ್ತು ಕೊಪ್ಪಾಳನ್ ಎಂದು ಕರೆಯುವ ಜನಾಂಗದ ಪುರುಷರು ದೇವಸ್ಥಾನಗಳಲ್ಲಿ ಈ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿ ಕೊಡುತ್ತಾರೆ. ಈ ವರ್ಗವು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಳಗೊಂಡವರಾಗಿರುತ್ತಾರೆ. ಅವರು ತೆಯ್ಯಂ ನೃತ್ಯದ ಏಕಮಾತ್ರ ಮೇಲ್ವಿಚಾರಕರಾಗಿರುತ್ತಾರೆ. ತೆಯ್ಯಂ ವೃತ್ತಿ-ಕಲೆಯನ್ನು ಕೆಲವು ಸೂಕ್ತ ಸಮಯದಲ್ಲಿ ಮಾತ್ರ ನಡೆಸಲಾಗುತ್ತದೆ.
ತೆಯ್ಯಂ ಭೂತಾರಾಧನೆಯು ಪ್ರಮುಖವಾಗಿ ಸ್ಥಳೀಯ ಶೂರರ ಮತ್ತು ವೀರನಾರಿಯರ ಬಲಿದಾನಗಳನ್ನು ವಿವರಿಸುವ ಸ್ಥಳೀಯ ಇತಿಹಾಸವಾಗಿದೆ. ಇದರಲ್ಲಿ ಬರುವ ಕೆಲವು ಹಾಡುಗಳು ತುಳುನಾಡಿನ ಪಾಡ್ದನಗಳ ಇತಿಹಾಸವನ್ನು ಬಿಂಬಿಸುತ್ತದೆ. ಈ ಪರಾಕ್ರಮಿಗಳಿಗೆ ದೈವತ್ವವನ್ನು ನೀಡಿ ಗೌರವಿಸಲಾಗುತ್ತಿದೆ.
ಮಧ್ಯಕಾಲೀನ ಪರಾಕ್ರಮಿಗಳಾದ ಕತಿವನ್ನೂರ್ ವೀರನ್ ಮತ್ತು ತಚ್ಚೋಳಿ ಒದೆಯನ್ ಅವರು ಹುತಾತ್ಮ ವೀರರಾಗಿದ್ದು, ಅವರ ಸ್ಥಳೀಯ ಇತಿಹಾಸವನ್ನು ಹಾಡಲಾಗುತ್ತದೆ.
ಪುದಿಯ (ಹೊಸ) ಭಗವತಿ ಮತ್ತು ಮಕ್ಕಂ ಅವರು ಈ ಭಯಾನಕ ಕಥೆಗಳ ವೀರ ನಾರಿಯರು. ಅವರ ಕುರಿತು ಬಾಯಿ ಮಾತಿನಲ್ಲಿ ಕೇಳಿಬರುವ ಕಥೆಗಳು ಈ ರೀತಿ ಇವೆ: ಮಕ್ಕಂ ಓರ್ವ ನೀತಿಗೆಟ್ಟ ಮಹಿಳೆ ಎಂದು ಅವಳ ಸಹೋದರರು ನಂಬಿಕೊಂಡಿದ್ದರು. ಈ ಎಲ್ಲಾ ಸಹೋದರರ ಹೆಂಡತಿಯರು 'ಮಕ್ಕಂ'ಳನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದ್ದರು. ಬಳಿಕ ಮಾತ್ಸರ್ಯದಿಂದ ಉರಿಯುತ್ತಿದ್ದ ಸಹೋದರರು ಮತ್ತು ಪತ್ನಿಯರು ಸೇರಿಕೊಂಡು ಮಕ್ಕಂ ಮತ್ತು ಆಕೆಯ ಮಕ್ಕಳನ್ನು ಆಳವಾದ ಬಾವಿಗೆ ಎಸೆಯುತ್ತಾರೆ. ಬಾವಿಯಲ್ಲೇ ಕೊನೆಯುಸಿರೆಳೆದ ಬಳಿಕ ಆಕೆಗೆ ದೈವತ್ವವನ್ನು ಕಲ್ಪಿಸಿ ಆರಾಧಿಸಲು ಆರಂಭಿಸಲಾಯಿತು. ಸ್ಥಳೀಯ ಕುಟುಂಬದಲ್ಲಿ ನಡೆದ ಈ ಘಟನೆಯು ನಂತರದಲ್ಲಿ ತೆಯ್ಯಂ ದೇವತೆಯ ಪ್ರಮುಖ ವಿಷಯವಾಯಿತು.
ಅನೇಕ ಮಕ್ಕಳನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಬೇಕು ಎಂಬುದಾಗಿ ಸ್ಥಳೀಯ ಮುಖ್ಯಸ್ಥನೊಬ್ಬನ ಇಚ್ಛೆಯಾಗಿತ್ತು. ಇದಕ್ಕೆ ಅವಳು ಪ್ರತಿರೋಧವನ್ನು ವ್ಯಕ್ತಪಡಿಸಿದ್ದಳು. ಪರಿಣಾಮವಾಗಿ ಅವಳನ್ನು ತೇಲುತ್ತಿರುವ ರಂಧ್ರವಿರುವ ಹಡಗಿನೊಳಗೆ ಎಸೆಯಲಾಯಿತು. ಅಲ್ಲದೆ ಹೊತ್ತಿ ಉರಿಯುತ್ತಿರುವ ದೀಪದ ಬತ್ತಿಯಿಂದ ಆಕೆಯ ತಲೆಯನ್ನು ಸುಡಲಾಯಿತು. ಈ ಘಟನೆಯ ನಂತರದಲ್ಲಿ ಸಮಾಜವು ಅವಳ ಸ್ಮರಣೆಯನ್ನು ಜೀವಂತವಾಗಿರಿಸಿದ್ದು, ಅವಳನ್ನು ದೇವತೆ ಎಂದು ಪರಿಗಣಿಸಿ 'ಪುದಿಯ ಭಗವತಿ' ಎಂದು ನಾಮಕರಣ ಮಾಡಿದರು. ಇವಳು ರೋಗರುಜಿನಗಳ ನಿವಾರಕ ದೇವತೆ ಮತ್ತು ಸಿಡುಬು ನಿವಾರಕ ದೇವತೆ. ಹೀಗೆ ಸ್ಥಳೀಯ ಇತಿಹಾಸವು ತೆಯ್ಯಂ ಕಥೆಗಳಾಗಿ ರೂಪಾಂತರ ಹೊಂದಿದವು.
|