ಮುಖ್ಯ ಪುಟ  ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
 
ದಕ್ಷಿಣಾಭಿಮುಖಿ ಜ್ಯೋತಿರ್ಲಿಂಗ - ಮಹಾಕಾಲೇಶ್ವರ
WDWD
ಶಿವನ ಸುಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಮಹಾಕಾಲ ಮಂದಿರವೂ ಒಂದು. ಶಿವಪುರಾಣದ ಪ್ರಕಾರ, ದೂಷಣನೆಂಬ ದಾನವನ ಆಟಾಟೋಪದಿಂದ ಕಂಗೆಟ್ಟ ಉಜ್ಜಯಿನಿಯ ಜನತೆ, ಅವನನ್ನು ನಿವಾರಿಸಲು ಈಶ್ವರನನ್ನು ಮೊರೆ ಹೋಗಿ ಪ್ರಾರ್ಥಿಸಿದರು. ಸಂತೃಪ್ತನಾದ ಈಶ್ವರನು ಪವಿತ್ರ ಜ್ಯೋತಿ ರೂಪದಲ್ಲಿ ಕಾಣಿಸಿಕೊಂಡ. ಅವನು ರಕ್ಕಸನನ್ನು ಸಂಹರಿಸಿ, ಭಕ್ತಾದಿಗಳ ಕೋರಿಕೆಯಂತೆ ಉಜ್ಜಯಿನಿಯಲ್ಲಿ ಶಿವಲಿಂಗವನ್ನು ಸ್ಥಾಪಿಸಿದ.

ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಏಕೈಕ ಶಿವಲಿಂಗವಿದು ಎಂಬ ಖ್ಯಾತಿಯೂ ಇಲ್ಲಿಗಿದೆ. ಮಾಟ-ಮಂತ್ರ-ತಂತ್ರ ಕ್ಷೇತ್ರದಲ್ಲಿಯೂ ಈ ಮಂದಿರಕ್ಕೆ ಮಹತ್ವದ ಇತಿಹಾಸವಿದೆ. ಕೆಲವು ಐತಿಹಾಸಿಕ ಅಂಶಗಳ ಪ್ರಕಾರ, ವೇದವ್ಯಾಸ, ಕಾಳಿದಾಸ, ಬಾಣಭಟ್ಟ ಮತ್ತು ರಾಜಾ ಭೋಜರ ಕೃತಿಗಳಲ್ಲಿ ಮಹಾಕಾಲನ ಸ್ಮರಣೆಯನ್ನು ನಾವು ಕಾಣಬಹುದು.

ಪ್ರಾಚೀನ ಮಹಾಕಾಲ ಮಂದಿರವನ್ನು 11ನೇ ಶತಮಾನದಲ್ಲಿ ಪುನರಪಿ ನಿರ್ಮಿಸಲಾಗಿತ್ತು. ಇದರ ನಿರ್ಮಾಣದ 140 ವರ್ಷಗಳ ಬಳಿಕ ಉಜ್ಜಯಿನಿಗೆ ದಾಳಿ ಮಾಡಿದ ಸುಲ್ತಾನ್ ಇಲ್ತಮಷ್, ಮಂದಿರವನ್ನು ಧ್ವಂಸ ಮಾಡಿದ. ಈಗಿರುವ ಮಂದಿರವು ಮರಾಠರ ಕಾಲದ್ದು. ಈ ಮಂದಿರದ ಪುನರ್ನಿರ್ಮಾಣ ಕಾರ್ಯವನ್ನು ಸುಮಾರು 250 ವರ್ಷಗಳ ಹಿಂದೆ ಮರಾಠರ ದಿವಾನ ಬಾಬಾ ರಾಮಚಂದ್ರ ಶೈನಾವಿಯ ಮೂಲಕ ಮಾಡಲಾಗಿತ್ತು.

ಭಸ್ಮ ಆರತಿ (ಭಸ್ಮ ಅಭಿಷೇಕ) ನಡೆಯುವ ಏಕೈಕ ಶಿವಲಿಂಗ ಇದು ಎನ್ನಲಾಗುತ್ತಿದೆ. ನಸುಕಿನ ಜಾವ 4ರಿಂದ 6 ಗಂಟೆಯ ನಡುವೆ ಈ ಭಸ್ಮಾರತಿಯು ತಾಳ ವಾದ್ಯಗಳ ಸಹಿತ ವೇದ ಮಂತ್ರಗಳು, ಸ್ತೋತ್ರಪಠಣ ನಡೆಯುತ್ತದೆ. ಈ ಆರತಿ ಕಾಲವು ಬಂ ಬಂ ಭೋಲೇ ಎಂಬ ಘೋಷಣೆಯೊಂದಿಗೆ ನಮ್ಮ ಅಂತರಾತ್ಮವನ್ನು ಜಾಗೃತಿಗೊಳಿಸುತ್ತದೆ. ಜನಸಾಮಾನ್ಯರಿಂದ ವಿಶೇಷ ವ್ಯಕ್ತಿಗಳವರೆಗೆ ಎಲ್ಲರೂ ಈ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾತುರತೆಯಿಂದಿರುತ್ತಾರೆ.

ಉಜ್ಜಯಿನಿ ಮಹಾಕಾಲ ಮಂದಿರದ ವಿಶೇಷ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವೀಡಿಯೋ ವೀಕ್ಷಿಸಿ
  1 | 2 | 3  >>