ಮಧ್ಯಪ್ರದೇಶದ ಮಾಳ್ವಾ ಪ್ರದೇಶದಲ್ಲಿರುವ ನರ್ಮದಾ ನದಿಯ ದಂಡೆಯ ಮೇಲೆ ಕಂಗೊಳಿಸುತ್ತಿದೆ ಶ್ರೀ ಓಂಕಾರೇಶ್ವರ ಸನ್ನಿಧಿ. ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಇದು, ಭಕ್ತ ಜನಕೋಟಿಯನ್ನು ಕೈಬೀಸಿ ಕರೆಯುತ್ತಿದೆ.
ಪುರಾಣ ಕಥೆಗಳಲ್ಲಿ ಓಂಕಾರೇಶ್ವರ ಹಾಗೂ ಮಮಲೇಶ್ವರ ಕುರಿತ ಉಲ್ಲೇಖವಿದೆ. ಭಕ್ತರು ಮಂದಿರವನ್ನು ಪ್ರವೇಶಿಸುವ ಮುಂಚೆ ಎರಡು ಮಂಟಪಗಳನ್ನು ದಾಟಿ ಸಾಗಬೇಕಾಗುತ್ತದೆ. ಓಂಕಾರೇಶ್ವರ ಜ್ಯೋತಿರ್ಲಿಂಗವು ನೆಲದ ಮೇಲೆ ಸ್ಥಾಪಿತವಾಗದೇ ನೈಸರ್ಗಿಕವಾಗಿ ಎತ್ತರದ ಸ್ಥಳದಲ್ಲಿ ನಿರ್ಮಾಣಗೊಂಡಿದೆ.
ಜ್ಯೋತಿರ್ಲಿಂಗ ಕ್ಷೇತ್ರದ ಸುತ್ತಲೂ ಸದಾ ಸ್ಫಟಿಕದಂತೆ ತಿಳಿಯಾದ, ಸಿಹಿಯಾದ ನರ್ಮದಾ ನೀರು ಜುಳು ಜುಳು ಎಂದು ಹರಿಯುತ್ತಾ ಇರುತ್ತದೆ. ಈ ಜ್ಯೋತಿರ್ಲಿಂಗದ ವಿಶೇಷತೆಯೆಂದರೆ, ವಿಗ್ರಹವು ಗೋಪುರದ ಕೆಳಗಡೆ ಸ್ಥಾಪಿತವಾಗಿಲ್ಲ. ಮಂದಿರದ ಮೇಲ್ಬಾಗದಲ್ಲಿ ಅದನ್ನು ಶಿವನು ಸ್ಥಾಪಿಸಿದ ಎಂಬುದು ಇಲ್ಲಿನ ಜನರ ನಂಬಿಕೆ. ಪ್ರತಿವರ್ಷ ಕಾರ್ತಿಕ ಪೌರ್ಣಮಿ ದಿನದಂದು ಬೃಹತ್ ಜಾತ್ರೆ ನಡೆಯುತ್ತದೆ ಇಲ್ಲಿ. ಮಾಳವಾ ಪ್ರದೇಶದ ಮಾಂಧಾತಾ ಪರ್ವತದ ಮೇಲೆ ವಿರಾಜಮಾನನಾಗಿದ್ದಾನೆ ಶ್ರೀ ಓಂಕಾರೇಶ್ವರ.
ಶಿವಪುರಾಣದಲ್ಲಿ ಓಂಕಾರೇಶ್ವರ ಹಾಗೂ ಮಮಲೇಶ್ವರರ ಕುರಿತು ಅನೇಕ ಕಥೆಗಳಲ್ಲಿ ಹಾಡಿ ಹೊಗಳಲಾಗಿದೆ. ಮಾಂಧತಾ ರಾಜ್ಯದ ಸೂರ್ಯ ವಂಶದ ಮಾಂಧಾತಾ ರಾಜಮನೆತನದವರಾದ ಆಂಬರೀಶ ಮತ್ತು ಮುಚುಕುಂದರು ಘೋರ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡ ಸ್ಥಳವಾಗಿದೆ ಇದು. ನಂತರ ತಮ್ಮ ಧಾರ್ಮಿಕ ಸೇವೆ ಮತ್ತು ತ್ಯಾಗಗಳಿಂದ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಈ ಪರ್ವತಕ್ಕೆ ಮಾಂಧಾತಾ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.
ಓಂಕಾರೇಶ್ವರ ಕ್ಷೇತ್ರದ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ.
|