ಪರಶಿವನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ "ತ್ರ್ಯಂಬಕ" ಎಂಬ ಪುಟ್ಟ ಗ್ರಾಮದಲ್ಲಿದೆ.
ಸಹ್ಯಾದ್ರಿಯ ಬೆಟ್ಟಗಳ ಅಡಿಯಲ್ಲಿ ಬರುವ ಈ ಗ್ರಾಮದ ಉದ್ದಗಲಕ್ಕೂ ಹರಡಿರುವ ವನಸಿರಿ, ಹಸಿರು ಗಿಡಮರಗಳ ಸಾಲಿನಲ್ಲಿ ಪ್ರಣವ ಸ್ವರೂಪಿ ಓಂಕಾರ ನಾದ ಮತ್ತು ಮಹಾಮೃತ್ಯುಂಜಯ ಮಂತ್ರ, ಭಾವುಕ ಮನದ ವ್ಯಕ್ತಿಗೆ ಭಕ್ತಿ ಮಾರ್ಗದ ಮೋಕ್ಷವನ್ನು ಸಾಕ್ಷಾತ್ಕರಿಸುತ್ತದೆ.
ನಾಸಿಕ್ ನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಗ್ರಾಮವನ್ನು ಪ್ರವೇಶಿಸಿದ ಕೂಡಲೆ ನಮಗೆ ತ್ರ್ಯಂಬಕೇಶ್ವರ ಕ್ಷೇತ್ರದ ಹೆಬ್ಬಾಗಿಲು ಕಾಣುತ್ತದೆ. ಬೃಹತ್ತಾದ ಈ ದೇವಸ್ಥಾನ ಇಂಡೋ-ಆರ್ಯನ್ ಶೈಲಿಯ ಶಿಲ್ಪಕಲೆಗೆ ಉತ್ತಮ ಉದಾಹರಣೆಯಾಗಿ ನಿಂತಿದೆ.
ತ್ರ್ಯಂಬಕೇಶ್ವರ ಕ್ಷೇತ್ರದ ಫೋಟೋಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮಂದಿರದ ಗರ್ಭಗೃಹವನ್ನು ಪ್ರವೇಶಿಸಿದ ಮೇಲೆ ಅರ್ಘ್ಯ ಪಾತ್ರೆಯಂತೆ ಕಾಣುವ ಸ್ಥಳದಲ್ಲಿ ಒಂದು ಇಂಚು ಅಳತೆಯ ಮೂರು ಶಿವಲಿಂಗಗಳನ್ನು ಕಾಣಬಹುದು. ಈ ಮೂರು ಲಿಂಗಗಳು ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ಪ್ರತಿಪಾದಿಸುತ್ತವೆ. "ಸೃಷ್ಟಿಕರ್ತನಾದ ಬ್ರಹ್ಮ, ಸ್ಥಿತಿಕರ್ತನಾದ ವಿಷ್ಣು ಮತ್ತು ಲಯ ಕರ್ತನಾದ ಪರಶಿವ, ಜ್ಯೋತಿರ್ಲಿಂಗ ಸ್ವರೂಪದಲ್ಲಿ ಇಲ್ಲಿ ನೆಲೆ ನಿಂತಿದ್ದಾರೆ" ಎಂಬುದು ನಂಬಿಕೆ. ಬ್ರಾಹ್ಮೀ ಮುಹೂರ್ತದ ಪೂಜೆಯ ನಂತರ ಶಿವನು ಪಂಚಮುಖಿಯಾಗುತ್ತಾನೆ. ಪೂಜೆಯ ನಂತರ ಅತಿರುದ್ರನಿಗೆ ಬೆಳ್ಳಿಯಿಂದ ಮಾಡಲಾಗಿರುವ ಪಂಚಮುಖವನ್ನು ತೊಡಿಸಲಾಗುತ್ತದೆ.
ಐತಿಹಾಸಿಕ ಹಿನ್ನೆಲೆ: ತ್ರ್ಯಂಬಕೇಶ್ವರ ದೇವಸ್ಥಾನ ಅತಿ ಪುರಾತನವಾದದ್ದು. 1755 ರಿಂದ 1786ರವರೆಗೆ ಮರಾಠಾ ಸಾಮ್ರಾಜ್ಯದ ಬಾಲಾಜಿರಾವ್ ಪೇಶ್ವೆ ಅಂದು ಸುಮಾರು 16 ಲಕ್ಷ ರೂ.ಗಳ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡನು ಎಂದು ಇತಿಹಾಸದಲ್ಲಿ ವಿವರಿಸಲಾಗಿದೆ.
|