ಹರೇ ರಾಮ ಹರೇ ಕೃಷ್ಣ, ರಾಮ ರಾಮ ಹರೇ ಹರೇ ಹರೇ ರಾಮ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಎಂಬ ನಾಮೋಚ್ಚಾರದೊಂದಿಗೆ ಭಕ್ತಾದಿಗಳು ತಮ್ಮ ಭಕ್ತಿ ಪರವಶತೆಯ ಉತ್ತುಂಗದಲ್ಲಿರುತ್ತಾರೆ. ತುಳಸಿ ಮಾಲೆ ಧರಿಸಿದ ಭಕ್ತರು, ಭಕ್ತಿಯ ಆವೇಶದಲ್ಲಿ ಹಾಡುತ್ತಾ, ನರ್ತಿಸುತ್ತಾ ಭಜಿಸುತ್ತಾರೆ... ಇದು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಮಹಾ ಸಂಸ್ಥೆ (ಇಸ್ಕಾನ್) ದೇವಾಲಯದಲ್ಲಿ ಕಂಡುಬರುವ ದೃಶ್ಯ.
ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಮಹಾಸಂಸ್ಥೆಯನ್ನು ಸ್ಥಾಪಿಸಿದ ಅಭಯಚರಣಾರವಿಂದ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹುಟ್ಟಿದ್ದು ಕೋಲ್ಕತಾದಲ್ಲಿ. 1896ರಲ್ಲಿ ವೈಷ್ಣವ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಗುರು ಶ್ರೀ ಭಕ್ತಿಸಿದ್ಧಾಂತ ಸರಸ್ವತಿ ಗೋಸ್ವಾಮಿ ಅವರನ್ನು ಮೊದಲ ಬಾರಿ ಕೋಲ್ಕತಾದಲ್ಲಿ ಭೇಟಿಯಾಗಿದ್ದು 1922ರಲ್ಲಿ. ಭಕ್ತಿ ಸಿದ್ದಾಂಧತ ಸರಸ್ವತಿಯವರು ಅಭಯರನ್ನು ಬಹುವಾಗಿ ನೆಚ್ಚಿಕೊಂಡರು ಮತ್ತು ವೈದಿಕ ಜ್ಞಾನವನ್ನು ಬೋಧಿಸುವುದಕ್ಕೆ ಜೀವನವನ್ನು ಮುಡಿಪಾಗಿಡುವಂತೆ, ವಿಶೇಷತಃ ಶ್ರೀಕೃಷ್ಣನ ಸಂದೇಶವನ್ನು ಇಂಗ್ಲಿಷ್ ಭಾಷಾ ಲೋಕಕ್ಕೆ ಬೋಧಿಸುವಂತೆ ಸೂಚಿಸಿದರು.
ತಮ್ಮ ಉದ್ದೇಶವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅಜಯ ಅವರು 1959ರಲ್ಲಿ ಸನ್ಯಾಸದೀಕ್ಷೆ ಸ್ವೀಕರಿಸಿದರು. 1966ರಲ್ಲಿ ಅವರು ಇಸ್ಕಾನ್ ಸಂಘಟನೆಯನ್ನು ಕಟ್ಟಿದರು. ಅಂದಿನಿಂದ ಇದುವರೆಗೆ ಇಸ್ಕಾನ್ ಭರ್ಜರಿಯಾಗಿ ಬೆಳೆದು ನಿಂತಿದ್ದು, 10,000 ಮಂದಿ ದೇವಳದ ಭಕ್ತರು ಹಾಗೂ 2.5 ಲಕ್ಷಕ್ಕೂ ಹೆಚ್ಚು ಮಂದಿ ಅನುಯಾಯಿಗಳನ್ನು ಹೊಂದಿದೆ.
ಸಮಾಜದ ಉನ್ನತಿಗಾಗಿ ಭಗವದ್ಗೀತೆ ಮತ್ತು ಇತರ ಪೌರಾಣಿಕ ಗ್ರಂಥಗಳ ಮೂಲಕವಾಗಿ ಕೃಷ್ಣ ಪ್ರಜ್ಞೆಯನ್ನು ಜಾಗೃತಿಗೊಳಿಸುವುದು ಈ ಪಂಥರಹಿತ, ಏಕದೇವತಾ ವಾದ ಆಂದೋಲನದ ಉದ್ದೇಶ.
ಭಕ್ತಿಯ ಅಲೆಗಳು ನ್ಯೂಯಾರ್ಕ್‌ನಿಂದ ಆರಂಭವಾಗಿ ವಿಶ್ವದ ಮೂಲೆ ಮೂಲೆಗೂ ಹರಡಿತು. ಅದೆಷ್ಟೋ ದೇಶಗಳು ಹರೇ ರಾಮ ಹರೇ ಕೃಷ್ಣ ಎಂಬ ನಾಮೋಚ್ಚಾರದ ಧ್ವನಿಯಿಂದ ಆವೃತವಾದವು. ಇಸ್ಕಾನ್ ಮಂದಿರಗಳಲ್ಲಿ ಬಹು ಸಂಖ್ಯೆಯಲ್ಲಿ ಭಕ್ತಾದಿಗಳು ಭಕ್ತಿಯ ಉತ್ತುಂಗಕ್ಕೇರುತ್ತಾರೆ ಮತ್ತು ಶಾಂತಿಯನ್ನು ಪಡೆಯುತ್ತಾರೆ. ಪವಿತ್ರ ಗ್ರಂಥ ಭಗವದ್ಗೀತೆಯಲ್ಲಿರುವಂತೆ ಈ ಭಕ್ತರು ನಾಲ್ಕು ಪ್ರಧಾನ ನಿಯಮಗಳನ್ನು ಅನುಸರಿಸುತ್ತಾರೆ.
ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ
|