ಈ ಮಂದಿರವಿರುವುದು ಮುಂಬಯಿಯ ಪ್ರಭಾದೇವಿ ಎಂಬಲ್ಲಿ ಕಾಕಾಸೇಹೇಬ್ ಗಾಡ್ಗೀಳ್ ಮಾರ್ಗ ಮತ್ತು ಎಸ್.ಕೆ.ಬೋಳೆ ಮಾರ್ಗ ಸೇರುವ ಮೂಲೆಯಲ್ಲಿ. ಇಲ್ಲಿ ಈಗ ಸಂಚಾರ ಸಮಸ್ಯೆ ತಲೆದೋರಿದೆ.
ಈ ಮಂದಿರವನ್ನು ಮಾಟುಂಗಾದ ಅಗ್ರಿ ಸಮಾಜದ ಶ್ರೀಮಂತ ಮಹಿಳೆ ದಿ.ದೇವುಬಾಯಿ ಪಟೇಲ್ ಅವರ ಆರ್ಥಿಕ ಸಹಕಾರ ಮತ್ತು ಸಲಹೆಯನ್ವಯ ಗುತ್ತಿಗೆದಾರ ದಿ.ಲಕ್ಷ್ಮಣ್ ವಿಠು ಪಾಟೀಲ್ ನಿರ್ಮಿಸಿದ್ದರು.
ಆಕೆ ಶ್ರೀಮಂತಳಾಗಿದ್ದರೂ, ಮಕ್ಕಳಿರಲಿಲ್ಲ. ಮಕ್ಕಳಾಗಲು ಗಣೇಶನಿಗೆ ಗುಡಿ ಕಟ್ಟಿಸುವುದಾಗಿ ಆಕೆ ಹರಕೆ ಹೊತ್ತಿದ್ದಳು. ಆದರೆ ದುರದೃಷ್ಟವೋ ಎಂಬಂತೆ ಆಕೆಯ ಪತಿ ಮರಣವನ್ನಪ್ಪಿದರು. ಆದರೆ ಗಣಪತಿಯ ಪರಮ ಭಕ್ತೆಯಾಗಿದ್ದ ಆಕೆ, ಗಣೇಶನಿಗೆ ಗುಡಿ ಕಟ್ಟಿಸುವ ಕಾರ್ಯ ಕೈಗೆತ್ತಿಕೊಂಡಳು.
ಮನೆಯಲ್ಲಿದ್ದ ಕ್ಯಾಲೆಂಡರಿನಲ್ಲಿ ಕಂಡ ಚಿತ್ರದಂತೆಯೇ ಗಣಪತಿ ವಿಗ್ರಹವನ್ನು ಕೆತ್ತಿಸಿದಳು. ಈ ಕ್ಯಾಲೆಂಡರಿನಲ್ಲಿದ್ದ ಚಿತ್ರವು ಮುಂಬಯಿಯ ವಾಳಕೇಶ್ವರದ ಬಾನ್‌ಗಂಗಾ ಎಂಬಲ್ಲಿದ್ದ, ಸುಮಾರು 500 ವರ್ಷ ಹಳೆಯ ಗಣಪತಿಯದಾಗಿತ್ತೆಂದು ನಂಬಲಾಗಿದೆ.
ಪ್ರಾರ್ಥನೆಯೊಂದರ ಸಂದರ್ಭ ದಿ.ದೇವುಬಾಯಿ ಅವರು ಗಣೇಶನನ್ನು ಸ್ತುತಿಸಿ, "ನನಗೆ ಮಕ್ಕಳಾಗುವುದು ಸಾಧ್ಯವಿಲ್ಲದಿದ್ದರೂ, ಮಕ್ಕಳಿಲ್ಲದ ಇತರ ಸ್ತ್ರೀಯರು ಇಲ್ಲಿಗೆ ಬಂದು ನಿನ್ನನ್ನು ಪ್ರಾರ್ಥಿಸಿದರೆ ಅವರಿಗೆ ಸಂತಾನಭಾಗ್ಯ ಕರುಣಿಸು" ಎಂದು ಪ್ರೀತಿಯ ಗಣೇಶನನ್ನು ಕೋರಿಕೊಂಡಳು.
ಈ ಮಂದಿರದ ಯಶಸ್ವೀ ಇತಿಹಾಸವನ್ನು ಗಮನಿಸಿದರೆ, ದಿವಂಗತ ದೇವುಬಾಯಿ ಪಾಟೀಲ್‌ಳ ಪ್ರಾಮಾಣಿಕ ಮತ್ತು ನಿಸ್ವಾರ್ಥ, ನಿಷ್ಕಳಂಕ ಭಕ್ತಿಯ ಕೋರಿಕೆಯನ್ನು ಗಣಪತಿ ಈಡೇರಿಸುತ್ತಿದ್ದಾನೆ ಎಂಬುದು ವೇದ್ಯವಾಗುತ್ತದೆ. ಈ ಕಾರಣದಿಂದ ಇಲ್ಲಿನ ಸಿದ್ಧಿವಿನಾಯಕನು ಸಂತಾನಭಾಗ್ಯ ಕರುಣಿಸುತ್ತಾನೆ ಎಂಬುದು ಭಕ್ತರ ಬಲವಾದ ನಂಬಿಕೆ. ಮಾತ್ರವಲ್ಲ "ನವಸಾಚ ಗಣಪತಿ" ಅಥವಾ "ನವಸಾಲ ಪಾವನಾರ ಗಣಪತಿ" (ನಿಷ್ಕಲ್ಮಷ ಹೃದಯದಿಂದ ಬೇಡಿಕೊಂಡರೆ ಒಲಿಯುವ ಗಣಪತಿ) ಎಂದು ಮರಾಠಿಯಲ್ಲಿ ಕರೆಯಲ್ಪಡುತ್ತಾನೆ.
ಇಲ್ಲಿಗೆ ಹೋಗುವುದು ಹೇಗೆ?: ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬಯಿಯು ಭೂ, ವಾಯು ಮತ್ತು ರೈಲುಮಾರ್ಗಗಳ ಮೂಲಕ ದೇಶದ ಪ್ರಮುಖ ಪಟ್ಟಣಗಳಿಂದ ಸಂಪರ್ಕಿತವಾಗಿದೆ.
ಎಲ್ಲಿ ಉಳಿದುಕೊಳ್ಳುವುದು?: ಮಂದಿರದಿಂದಲೇ ಯಾವುದೇ ಧರ್ಮಛತ್ರ ಅಥವಾ ಯಾತ್ರಾಗೃಹಗಳಿಲ್ಲದಿದ್ದರೂ, ಸುತ್ತ ಮುತ್ತ ಬಜೆಟಿಗೆ ತಕ್ಕಂತೆ ಹೋಟೆಲ್‌ಗಳು, ಧರ್ಮಶಾಲೆಗಳು, ಮತ್ತು ಲಾಡ್ಜ್‌ಗಳು ಸಾಕಷ್ಟಿವೆ.
ಸಿದ್ದಿ ವಿನಾಯಕ ಮಂದಿರದ ಪೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
|