ಮುಖ್ಯ ಪುಟ  ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
 
ರಾಜಸ್ಥಾನದ ಜೈನ ಪುಣ್ಯಕ್ಷೇತ್ರ: ಮಹಾವೀರ ಮಂದಿರ
WD
ಭಾರತದ ಅತ್ಯಂತ ಜನಪ್ರಿಯ ಜೈನ ತೀರ್ಥ ಕ್ಷೇತ್ರಗಳಲ್ಲಿ ರಾಜಸ್ಥಾನದ ಶ್ರೀಮಹಾವೀರ್‌ಜಿ ಕ್ಷೇತ್ರವೂ ಒಂದು. 24ನೇ ಜೈನ ತೀರ್ಥಂಕರ ಮಹಾವೀರನ ಈ ಮಂದಿರವನ್ನು ಗಂಭೀರ್ ನದಿ ತಟದಲ್ಲಿ ನಿರ್ಮಿಸಲಾಗಿದೆ. ಅಮೃತಶಿಲೆಯಲ್ಲಿ ಆಕರ್ಷಕವಾಗಿರುವ ಈ ಮಂದಿರಕ್ಕೆ ವಿಶಿಷ್ಟವಾದ ಐತಿಹಾಸಿಕ ಹಿನ್ನೆಲೆಯೂ ಇದೆ.

ಸುಮಾರು ಎರಡು ಶತಮಾನಗಳ ಹಿಂದೆ, ಹಸುವೊಂದಿತ್ತು. ಅದು ಬೆಳಿಗ್ಗೆ ಮನೆ ಬಿಟ್ಟರೆ ಸಾಯಂಕಾಲ ಹಿಂದಿರುಗಿ ಬರುತ್ತಿತ್ತು. ಇದರಲ್ಲೇನೂ ಹೊಸ ವಿಷಯ ಇರಲಿಲ್ಲ. ಆದರೆ ಅದು ಹಿಂತಿರುಗಿ ಬರುವಾಗ ಅದರ ಕೆಚ್ಚಲು ಖಾಲಿ ಖಾಲಿ. ಈ ನಿಗೂಢವನ್ನು ಭೇದಿಸಲು, ಒಂದು ದಿನ ಆಕಳಿನ ಮಾಲೀಕರ ಮಗ ಅದನ್ನೇ ಅನುಸರಿಸಿದ. ಹಸು ಒಂದು ನಿರ್ದಿಷ್ಟ ಜಾಗದಲ್ಲಿ ನಿಲ್ಲುತ್ತಿತ್ತು, ಮತ್ತು ತನ್ನ ಕೆಚ್ಚಲಿನಿಂದ ಹಾಲನ್ನೆಲ್ಲಾ ಖಾಲಿ ಮಾಡಿಸುತ್ತಿತ್ತು ಎಂಬುದನ್ನು ಕಂಡುಕೊಂಡನಾತ. ತೀವ್ರ ಕುತೂಹಲಗೊಂಡ ದನಗಾಹಿಗಳು, ಆ ಸ್ಥಳವನ್ನು ಅಗೆದರು. ಅಗೆದಾಗ ಶ್ರೀ ಮಹಾವೀರನ ವಿಗ್ರಹವೊಂದು ದೊರೆಯಿತು. ಇದು ಮಹಾವೀರನ ಮೂರ್ತಿಯ ಹಿನ್ನೆಲೆ.

WD
ಅಮೃತ ಶಿಲೆಯ ಮೇಲೆ ಕಟ್ಟಿರುವ ಈ ಸುಂದರ ಮಹಾವೀರ ಮಂದಿರವು ಪುರಾತನ ಮತ್ತು ಆಧುನಿಕ ಜೈನ ಶಿಲ್ಪಕಲೆಯ ಪ್ರತೀಕ. ಪ್ರಾಚೀನ ಜೈನ ಮಂದಿರಗಳು ಅದ್ಭುತ ಅಲಂಕಾರ ಮತ್ತು ಕೆತ್ತನೆ ಕೆಲಸದಿಂದ ರಾರಾಜಿಸುತ್ತಿದ್ದರೆ, ಮಹಾವೀರ ಮಂದಿರವು ಸಮಕಾಲೀನ ವಿನ್ಯಾಸವನ್ನು ಹೊಂದಿದೆ. ಹೆಚ್ಚಿನ ಜೈನ ಮಂದಿರಗಳಂತೆಯೇ, ಇದು ಕೂಡ ಸಣ್ಣ ಗುಡಿಗಳ ಸಂಕೀರ್ಣ. ಮುಖ್ಯ ಮಂದಿರದ ಒಳಗೆ ಜೈನ ತೀರ್ಥಂಕರರ ವಿಗ್ರಹಗಳು ಸೂಕ್ಷ್ಮವಾಗಿ ಕೆತ್ತಲಾದ ಕಂಬಗಳಿಂದ ಆವೃತವಾಗಿವೆ.

WD
ಶಾಂತಿನಾಥ ಸ್ವಾಮಿಯ ಬೃಹದಾಕಾರದ ವಿಗ್ರಹವೂ ಇಲ್ಲಿದೆ. ಇದರ ಎತ್ತರ 32 ಅಡಿ. ಅತ ತನ್ನ ಭಕ್ತರನ್ನೇ ದಿಟ್ಟಿಸಿ ನೋಡುತ್ತಿರುವಂತಿದೆ. ಈ ಮಂದಿರದ ಅತ್ಯಂತ ಆಕರ್ಷಕ ನೋಟವು ಅನಾವರಣಗೊಳ್ಳುವುದು ಸಂಜೆಗತ್ತಲಾದ ಬಳಿಕ. ಇಡೀ ಸಂಕೀರ್ಣವೇ ವಿದ್ಯುದ್ದೀಪಗಳಿಂದ ಅಲಂಕೃತವಾಗಿ, ದೀಪಗಳ ಹಬ್ಬವೋ ಎಂಬಂತೆ ಕಂಗೊಳಿಸುತ್ತದೆ.

ಶ್ರೀ ಮಹಾವೀರ ಮಂದಿರವನ್ನು ಸಂದರ್ಶಿಸಲು ಸೂಕ್ತ ಸಮಯ ಎಂದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳು. ಅದು ಆ ಮಂದಿರದಲ್ಲಿ ಹಬ್ಬದ ಕಾಲ. ಶ್ರೀ ಮಹಾವೀರ ಹಬ್ಬ ನಡೆಯುವುದು ಚೈತ್ರ ಶುಕ್ಲ ಏಕಾದಶಿಯಿಂದ ವೈಶಾಖ ಕೃಷ್ಣ ದ್ವಿತೀಯ (ಅಂದರೆ ಮಾರ್ಚ್-ಏಪ್ರಿಲ್ ಅವಧಿ) ನಡೆಯುತ್ತದೆ.

ಇಲ್ಲಿಗೆ ಹೋಗುವುದು ಹೇಗೆ?
ರೈಲುಮಾರ್ಗ: ಈ ದಿಗಂಬರ ಜೈನ ತೀರ್ಥಯಾತ್ರಾ ಸ್ಥಳವು ದೆಹಲಿ-ಮುಂಬಯಿ ಬ್ರಾಡ್‌ಗೇಜ್ ಮಾರ್ಗದಲ್ಲಿರುವ ಸವಾಯ್ ಮಾಧೋಪುರದಿಂದ ರೈಲಿನಲ್ಲಿ 90 ಕಿ.ಮೀ. ದೂರದಲ್ಲಿದೆ.

ರಸ್ತೆ ಮಾರ್ಗ: ಮಹಾವೀರ ಮಂದಿರವು ಜೈಪುರದಿಂದ 176 ಕಿ.ಮೀ. ದೂರದಲ್ಲಿದೆ.

ವಾಯುಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಜೈಪುರ. (176 ಕಿ.ಮೀ. ದೂರ).

ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವೀಡಿಯೋ ವೀಕ್ಷಿಸಿ
ಫೋಟೋಗ್ಯಾಲರಿ
ಪೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು
ಮುಂಬಯಿಯ ಶ್ರೀ ಸಿದ್ಧಿವಿನಾಯಕ ಮಂದಿರ
ಇಂದೋರಿನ ಖಜ್ರಾನಾ ಗಣೇಶ
ಕಲಿಯುಗ ವರದ ಶಬರಿಮಲೆ ಅಯ್ಯಪ್ಪ
ಕೃಷ್ಣ ಭಕ್ತಿಯ ತಾಣ - ಇಸ್ಕಾನ್ ಮಂದಿರ
ಸರ್ಪರಾಜ ನಾಗಚಂದ್ರೇಶ್ವರ
ಅದ್ಭುತ ಶಿಲ್ಪಕಲೆಯ ಬೀಡು- ತ್ರ್ಯಂಬಕೇಶ್ವರ