ಯಾ ದೇವಿ ಸರ್ವ ಭೂತೇಷು ಶಕ್ತಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||
ಗುಜರಾತಿನಲ್ಲಿ ಇರುವ ಅಂಬಾಜಿ ದೇವಸ್ಥಾನ ಇಂದಿಗೂ ಬಹುದೊಡ್ಡ ಯಾತ್ರಾಸ್ಥಳ. ಇಲ್ಲಿನ ದೇವತೆಯನ್ನು ಅಂಬಾ ಭವಾನಿ ಎಂದು ಕರೆಯುತ್ತಾರೆ. ಇಲ್ಲಿನ ದೇವಸ್ಥಾನ ಪುರಾತನವಾದುದು ಎಂಬ ನಂಬಿಕೆ ಇದೆ. ಇಲ್ಲಿನ ಗರ್ಭಗೃಹದಲ್ಲಿ ದೇವತೆಯ ಮೂರ್ತಿ ಇಲ್ಲ. ಆದರೆ ದೇವತೆಯ ಸಿಂಹಾಸನ ಉಂಟು ಇದೇ ಸಿಂಹಾಸನಕ್ಕೆ ಆಭರಣಗಳಿಂದ ಅಲಂಕೃತ ಮಾಡಿ ಪೂರ್ಣ ದರ್ಶನವನ್ನು ಭಕ್ತರಿಗೆ ನೀಡಲಾಗುತ್ತದೆ.
ಪೌರಾಣಿಕ ಹಿನ್ನಲೆಯಲ್ಲಿ ಅಂಬೆಯು ಕೃಷ್ಣನನ್ನು ತನ್ನ ಪತಿಯಾಗಿ ಪಡೆದುಕೊಳ್ಳಲು ರುಕ್ಮಿಣಿಗೆ ಸಹಾಯ ಮಾಡಿದಳು ಎಂಬ ನಂಬಿಕೆ ಇದೆ. ಅಲ್ಲದೇ ಕೃಷ್ಣ ಪರಮಾತ್ಮನ ಪ್ರಥಮ ಕೇಶ ಮುಂಡನ ಇಲ್ಲಿ ನಡೆಯಿತು ಎಂದು ನಂಬಿಕೆ ಇದೆ.
ಪ್ರತಿ ಹುಣ್ಣಿಮೆಯ ದಿನದಂದು ಇಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿದ್ದು, ಖ್ಯಾತ ಸಂತರು, ಸಂಗೀತಕಾರರು ಅಂಬಾ ಮಾತೆಯ ಗುಣಗಾನವನ್ನು ಮಾಡಿದ್ದಾರೆ. ಇಲ್ಲಿನ ಶಾಕ್ತ ಮತ್ತು ಭಕ್ತ ಪಂಥಗಳ ಅನುಯಾಯಿಗಳು ಅಂಬಾ ಮಾತೆಯ ಪೂಜೆ ಮಾಡುತ್ತಾರೆ.
ಭಾರತದಲ್ಲಿ ಇರುವ 51 ಶಕ್ತಿ ಪೀಠಗಳಲ್ಲಿ ಅಂಬಾಜಿಯೂ ಕೂಡ ಒಂದು ಎಂದು ಪ್ರಖ್ಯಾತಿ ಪಡೆದಿದೆ. ಶಕ್ತಿ ಪೀಠಗಳಲ್ಲಿ 12 ಪೀಠಗಳು ಪ್ರಮುಖ ಶಕ್ತಿ ಪೀಠಗಳು ಎಂದು ಹೆಸರು ಪಡೆದಿದ್ದು. ಉಜ್ಜೈನಿಯ ಭಗವತಿ ಮಹಾಕಾಳಿ, ಮಹಾಶಕ್ತಿ. ಕಂಚಿಯ ಕಾಮಾಕ್ಷಿ, ಮಲಯಗಿರಿಯ ಭ್ರಮರಾಂಭ, ಕನ್ಯಾಕುಮಾರಿಯ ಕುಮಾರಿಕಾ, ಮತ್ತು ಅನಾರ್ಟ್‌ನ ಅಂಬಾಜಿ.
ಕೊಲ್ಹಾಪುರದ ಮಹಾಲಕ್ಷ್ಮೀ, ವಾರಣಾಸಿಯ ವಿಶಾಲಾಕ್ಷಿ, ಗಯಾದ ಮಂಗಳಾವತಿ, ಬಂಗಾಲದಲ್ಲಿರುವ ಸುಂದರಿ ಭವಾನಿ ಮತ್ತು ನೇಪಾಳದಲ್ಲಿ ಇರುವ ಗುಹ್ಯಕೇಶ್ವರಿ ಪ್ರಮುಖವಾಗಿವೆ.
|