ಅಮರತ್ವ ಪಡೆಯುವ ಉದ್ದೇಶದಿಂದ ಶಿವನನ್ನು ಕುರಿತು ತಪಸ್ಸು ಮಾಡುತ್ತಿರುವಾಗ ದೇವತೆಗಳು ಬಂದು ಶ್ರೀ ಮಹಾಲಕ್ಷ್ಮಿಯಲ್ಲಿ ಮೊರೆಯಿಟ್ಟಾಗ, ಅವಳು ಕಂಹಾಸುರನು ಅಮರತ್ವದ ವರವನ್ನು ಕೇಳದಂತೆ ಮೂಕನನ್ನಾಗಿ ಮಾಡಿದಳು. ಅಂದಿನಿಂದ ಅವನು ಮೂಕಾಸುರನಾದನು.
ದೇವತೆಗಳಿಂದಾಗಿ ತಾನು ಮೂಕನಾದುದನ್ನು ತಿಳಿದು ಮೂಕಾಸುರನು ದೇವತೆಗಳಿಗೆ ಅತಿಯಾದ ಉಪಟಳ ನೀಡತೊಡಗಿದ. ಆಗ ದೇವತೆಗಳು ಕೋಲ ಮಹರ್ಷಿಯ ಮೂಲಕ ಕೋಲಾಪುರೇಶಿಯ ಮೊರೆ ಹೋದರು. ದೇವತೆಗಳ ದೈನ್ಯ ಸ್ಥಿತಿ ಕಂಡು ಕೋಲಾಪುರೇಶಿಯಾದ ಶ್ರೀಮಹಾಲಕ್ಷ್ಮಿಯು ವೀರಭದ್ರ, ಗಣಪತಿಯರೊಡನೆ ಶಿವ ಸಮೇತಳಾಗಿ ಕೋಲಾಪುರಕ್ಕೆ ಬಂದಳು. ಜ್ಯೇಷ್ಠ ಶುಕ್ಲ ಅಷ್ಟಮಿಯಂದು ತನ್ನ ಚಕ್ರದಿಂದ ಮೂಕಾಸುರನ ಶಿರಸ್ಸನ್ನು ಕತ್ತರಿಸಿದ್ದಳು, ಆ ಬಳಿಕ ದೇವಿ ಮೂಕಾಂಬಿಕೆ ಎಂಬ ಹೆಸರನ್ನು ಪಡೆದು ತೇಜೋಮಯ ಶ್ರೀ ಚಕ್ರಬಿಂಬ ರೂಪವಾಗಿ ಅಖಂಡ ಸಚ್ಚಿದಾನಂದ ಪರಬ್ರಹ್ಮ ಸ್ವರೂಪ ಲಿಂಗವನ್ನು ಸೇರಿದಳು. ಅಂದಿನಿಂದ ಜಗತ್ತಿನ ಮಂಗಳಕ್ಕಾಗಿ ಮಂಗಳ ಸ್ವರೂಪದಲ್ಲಿ ಶಿವನು ರಚಿಸಿದ ಶ್ರೀಚಕ್ರದ ಬಿಂದು ಸ್ವರೂಪವಾಗಿ ಕೊಲ್ಲೂರಿನಲ್ಲಿ ನೆಲೆಯಾಗಿ ಕೊಲ್ಲೂರು ಮೂಕಾಂಬಿಕೆ ಎಂದೇ ಜಗದ್ವಿಖ್ಯಾತಿ ಗಳಿಸಿದಳು. ಉತ್ಸವ:
ಕೊಲ್ಲೂರು ದೇವಳದಲ್ಲಿ ಪಂಚ ಪೂಜೆ, ತ್ರಿಕಾಲ ಬಲಿ, ಉತ್ಸವಗಳು ನಡೆದುಕೊಂಡು ಬರುತ್ತಿದೆ. ಉತ್ಸವಗಳಲ್ಲಿ ಮುಖ್ಯವಾಗಿ ನಿತ್ಯೋತ್ಸವ, ವಾರೋತ್ಸವ,ಮಾಸೋತ್ಸವ, ಷಣ್ಮಾಸೋತ್ಸವ ಮತ್ತು ವಾರ್ಷಿಕ ಉತ್ಸವಗಳನ್ನು ಆಚರಿಸಲಾಗುತ್ತದೆ.
ಇದಲ್ಲದೆ ಚಾಂದ್ರಮಾನ ಯುಗಾದಿ, ಶ್ರೀರಾಮ ನವಮಿ, ನವರಾತ್ರಿ,ಸೌರಯುಗಾದಿ, ಶ್ರೀಮೂಕಾಂಬಿಕಾ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಶ್ರೀಕೃಷ್ಣಾಷ್ಟಮಿ, ನರಕ ಚತುರ್ದಶಿ ಸೇರಿದಂತೆ ಪ್ರಮುಖ ಉತ್ಸವ ಇಲ್ಲಿ ನಡೆಯುತ್ತದೆ. ಮಾರ್ಗ:
ಉಡುಪಿಯಿಂದ 70 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ರೈಲಿನಲ್ಲಿ ಬಂದಲ್ಲಿ ಕುಂದಾಪುರ ಸ್ಟೇಶನ್‌ನಲ್ಲಿ ಇಳಿದರೆ 40 ಕಿ.ಮೀ. ದೂರ. ಕುಂದಾಪುರದಿಂದ ನೇರ ತಲ್ಲೂರು ಮಾರ್ಗವಾಗಿ ಬಸ್ಸಿನಲ್ಲಿ ಪ್ರಯಾಣಿಸಬಹುದು. ಬಸ್‌ನಲ್ಲಿ ಹೊರಟರೆ 36 ಕಿ.ಮೀ.ದೂರವಿದೆ. ಕೊಲ್ಲೂರು ಬಸ್ ನಿಲ್ದಾಣದಿಂದ ದೇವಳಕ್ಕೆ ರಿಕ್ಷಾದಲ್ಲೂ ಹೋಗಬಹುದು, ಕಾಲ್ನಡಿಗೆಯಲ್ಲಿ ಹೋದರೆ ಪರಿಸರ ಸೌಂದರ್ಯವನ್ನು ಸವಿಯಬಹುದು. ತುಂಬಾ ಲಗೇಜ್ ಇಲ್ಲದಿದ್ದರೆ, ಸುಮಾರು ಅರ್ಧ ಕಿ.ಮೀ.ದೂರದ ಸೌಪರ್ಣಿಕಾ ನದಿಯ ಸ್ನಾನ ಘಟ್ಟಕ್ಕೆ ಹೋಗಿ ತೀರ್ಥಸ್ನಾನ ಮಾಡಿ ಬರಬಹುದು.
ಚಿತ್ರಗಳು ಮತ್ತು ವೀಡಿಯೋ: ಸಂತೋಷ್ ಕುಂದೇಶ್ವರ
|