ಅರವಿಂದ ಶುಕ್ಲಾ
ಭಕ್ತಾಗ್ರೇಸರ ಹನುಮಂತನ ಭಕ್ತರಿಗಾಗಿ, ವಿಶ್ವದ ಮೊತ್ತ ಮೊದಲ ಮತ್ತು ಅಪರೂಪದ ಹನುಮಾನ್ ಮ್ಯೂಸಿಯಂ ಉತ್ತರ ಪ್ರದೇಶ ರಾಜಧಾನಿ ಲಖ್ನೋದಲ್ಲಿದೆ.
ಭಗವಾನ್ ಹನುಮಂತನಿಗೆ ಸಂಬಂಧಿಸಿದ ಅಪರೂಪದ ವಸ್ತುಗಳು ಇಲ್ಲಿದ್ದು, ಲಿಮ್ಕಾ ದಾಖಲೆಗಳ ಪುಸ್ತಕದಲ್ಲೂ ಈ ವಸ್ತು ಸಂಗ್ರಹಾಗಾರದ ಹೆಸರು ದಾಖಲಾಗಿದೆ. ಹನುಮದ್ಭಕ್ತ, ಸುನಿಲ್ ಗೊಂಬಾರ್ ಎಂಬವರೇ ಈ ವಸ್ತು ಸಂಗ್ರಹಾಲಯದ ಹಿಂದಿನ ರೂವಾರಿ. ವಿಶ್ವದ ವಿವಿಧೆಡೆಗಳಿಂದ ಸುನಿಲ್ ಅವರು ಈ ವಸ್ತುಗಳನ್ನು ಸಂಗ್ರಹಿಸಿದ್ದಾರೆ.
ಲಖ್ನೋದ ಇಂದಿರಾನಗರದಲ್ಲಿರುವ ತಮ್ಮ ಮನೆಗೆ ಅವರು "ಬಜರಂಗ ನಿಕುಂಜ್" ಎಂದೇ ಹೆಸರಿಟ್ಟಿದ್ದು, ಅದರ ಮೊದಲ ಮಹಡಿಯಲ್ಲೇ ಈ ವಸ್ತು ಸಂಗ್ರಹಾಗಾರವಿದೆ. ಭಗವಾನ್ ಶ್ರೀ ರಾಮನ ಚಿಹ್ನೆಗಳಿಂದ ಅಲಂಕೃತವಾದ "ಚರಣ ಪಾದುಕೆ"ಗಳು ಇಲ್ಲಿವೆ. ಇವು ಬೆಳ್ಳಿಯ ಕಲಾ ಕೌಶಲ್ಯದಿಂದ ಮಾಡಲ್ಪಟ್ಟಿವೆ. ಶ್ರೀರಾಮ ಉಚ್ಚರಿಸಿದನೆನ್ನಲಾದ ಹನುಮಂತನ ಸಹಸ್ರ ನಾಮಾವಳಿಯೂ ಇಲ್ಲಿದೆ. ಹನುಮಾನ್ ಸಹಸ್ರನಾಮ ಸ್ತೋತ್ರದಿಂದ ಇವುಗಳನ್ನು ಪಡೆದುಕೊಳ್ಳಲಾಗಿದ್ದು, ಸಂಸ್ಕೃತದಿಂದ ಹಿಂದಿಗೆ ಭಾಷಾಂತರಿಸಲಾಗಿದೆ.
ಅಲ್ಲದೆ 600ರಷ್ಟು ಅತ್ಯಂತ ಅಪರೂಪದ ಚಿತ್ರಗಳೂ ಇಲ್ಲಿದ್ದು, ಅವುಗಳಲ್ಲಿ ಕೆಲವಂತೂ 17ನೇ ಶತಮಾನಕ್ಕೆ ಸೇರಿದವು. ಹನುಮಂತನ ಅಪರೂಪದ ವಿಗ್ರಹಗಳು ಭಕ್ತರನ್ನು ಸೆಳೆಯುತ್ತದೆ.
ಹನುಮನ ಪವಿತ್ರ ಜಗತ್ತಿನ ಕೆತ್ತನೆ ಕಲಾ ಸೌಂದರ್ಯವು ಮ್ಯೂಸಿಯಂನ ಗೋಡೆಗಳಲ್ಲಿ ರಾರಾಜಿಸುತ್ತಿದೆ. ಈ ಚಿತ್ರಕಲೆಗಳಲ್ಲಿ, ಹನುಮಂತನ ಕುಟುಂಬ, ಭಗವಾನ್ ಶಿವ, ರಾಮ-ಸೀತೆ, ಲಕ್ಷ್ಮಿ, ಹನುಮಂತನ ತಂದೆ ಕೇಸರಿ ಮತ್ತು ತಾಯಿ ಅಂಜನಾ, ಹನುಮನ ಗುರು ಸೂರ್ಯ ಮತ್ತು ಪವನ ದೇವನನ್ನು ಈ ಕೆತ್ತನೆಗಳಲ್ಲಿ ಕಾಣಬಹುದಾಗಿದೆ. ಹನುಮಂತನ ಮಿತ್ರ ಸುಗ್ರೀವ, ಅಂಗದ, ನಳ, ನೀಳ, ಜಾಂಬವಂತರನ್ನೂ ಈ ಕೆತ್ತನೆ ಜಗತ್ತಿನಲ್ಲಿ ಕಾಣಬಹುದು. ಇದರೊಂದಿಗೆ ಹನುಮದ್ಭಕ್ತ ಗೋಸ್ವಾಮಿ ತುಳಸೀದಾಸನನ್ನೂ ಇಲ್ಲಿ ಕೆತ್ತಲಾಗಿದೆ.
ಭಗವಂತ ಹನುಮನಿಗೆ ಸಂಬಂಧಿಸಿದ ಹಲವಾರು ಕ್ಯಾಸೆಟ್‌ಗಳು, ಸಿಡಿಗಳೂ ಇಲ್ಲಿ ಸಾಕಷ್ಟಿವೆ. ಸುಮಾರು 250ರಷ್ಟು ಪುಸ್ತಕಗಳು, ಹನುಮಂತನ ಕಿರೀಟ, ಕಿವಿಯೋಲೆ, ಗದೆ, ಧ್ವಜ, ಸಿಂಧೂರ ಮುಂತಾದವನ್ನೂ ಇಲ್ಲಿ ಕಾಣಬಹುದು. ದೇಶದ ವಿವಿಧ ಭಾಗಗಳಲ್ಲಿ ಹನುಮನ ಮಹಿಮೆಯನ್ನು ಪ್ರಚುರಪಡಿಸಿದ ನೀಮ್ ಕರೌಲಿ ಬಾಬಾ, ಗುರು ಸಮರ್ಥ ರಾಮದಾಸ್ ಮುಂತಾದ ಸಂತರ ಚಿತ್ರಗಳು ಈ ಮ್ಯೂಸಿಯಂನಲ್ಲಿವೆ. ಹನುಮಂತನಿಗೆ ಸಂಬಂಧಿಸಿದ ಮಾಹಿತಿ ಇರುವ 137 ವೆಬ್‌ಸೈಟ್‌ಗಳ ಪಟ್ಟಿಯನ್ನು ಕೂಡ ನೀಡಲಾಗಿದೆ. ಈ ವಸ್ತುಸಂಗ್ರಹಾಲಯವನ್ನು 2004ರ ನವೆಂಬರ್ 24ರಂದು ಅಧಿಕೃತವಾಗಿ ಉದ್ಘಾಟಿಸಲಾಗಿತ್ತು.
|