"ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ, ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"
ತಿರುಪತಿ ಬೆಟ್ಟದಲ್ಲಿರುವ ಸಪ್ತಗಿರಿಯೊಡೆಯ ಶ್ರೀ ವೆಂಕಟೇಶ್ವರ ಜಗನ್ನಿಯಾಮಕ ಶಕ್ತಿ. ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂಬ ಹೆಗ್ಗಳಿಕೆ ತಿರುಮಲದ ಬಾಲಾಜಿ ಮಂದಿರಕ್ಕಿದೆ. ಅತೀ ಹೆಚ್ಚು ಭಕ್ತಾದಿಗಳನ್ನು ಸೆಳೆಯುವ ಸುಕ್ಷೇತ್ರವಿದು. ಇದನ್ನು ನೋಡಿಕೊಳ್ಳುತ್ತಿರುವುದು ತಿರುಮಲ-ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ).
ಹಿನ್ನೆಲೆ: ಬಾಲಾಜಿ ಅಥವಾ ವೆಂಕಟೇಶ್ವರನು ಮಹಾವಿಷ್ಣುವಿನ ಅವತಾರ. ತಿರುಮಲ ಬಳಿಯ ಸ್ವಾಮಿ ಪುಷ್ಕರಿಣಿಯ ದಕ್ಷಿಣ ಭಾಗದಲ್ಲಿ ಆತ ನೆಲಸಲು ಬರುತ್ತಾನೆ. ತಿರುಮಲ-ತಿರುಪತಿ ಸುತ್ತಲಿರುವ ಏಳು ಬೆಟ್ಟಗಳನ್ನು ಸಪ್ತಗಿರಿ ಎಂದು ಕರೆಯಲಾಗುತ್ತದೆ. ಈ ಏಳು ಬೆಟ್ಟಗಳು ಶೇಷನಾಗನ ಏಳು ಹೆಡೆಗಳು ಎಂದೂ ನಂಬಲಾಗುತ್ತದೆ. ಏಳನೇ ಬೆಟ್ಟವಾದ ವೆಂಕಟಾದ್ರಿಯಲ್ಲಿ ಶ್ರೀ ವೆಂಕಟೇಶ್ವರನ ಸನ್ನಿಧಿ ಇದೆ.
11ನೇ ಶತಮಾನದಲ್ಲಿದ್ದ ಸಂತ ರಾಮಾನುಜರು ತಿರುಪತಿಯ ಸಪ್ತಗಿರಿಯನ್ನೇರಿದಾಗ ಅಲ್ಲಿ ಭಗವಾನ್ ಶ್ರೀನಿವಾಸನು ಅವರಿಗೆ ದರ್ಶನ ನೀಡಿದ ಎಂಬ ಪ್ರತೀತಿ ಇದೆ. ಇಲ್ಲಿ ವೈಕುಂಠ ಏಕಾದಶಿ ದಿನ ಸ್ವಾಮಿಯ ದರ್ಶನ ಪಡೆದರೆ ಎಲ್ಲಾ ಪಾಪಗಳೂ ಕಳೆಯುತ್ತವೆ ಎಂದು ಭಕ್ತರು ನಂಬುತ್ತಾರೆ. ಅದಲ್ಲದೆ ಇಹಲೋಕ ತ್ಯಜಿಸಿದ ಬಳಿಕ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದೂ ಹೇಳಲಾಗುತ್ತದೆ.
ದೇವಸ್ಥಾನದ ಇತಿಹಾಸ: ದೇವಳದ ಇತಿಹಾಸವು ಸುಮಾರು 9ನೇ ಶತಮಾನದಷ್ಟು ಹಿಂದಿನದು. ಕಾಂಚಿಪುರದ ಅರಸರಾದ ಪಲ್ಲವರು ಈ ಮಂದಿರವನ್ನು ಪೋಷಿಸಿದರು. ಆದರೆ 15ನೇ ಶತಮಾನದಲ್ಲಿ ವಿಜಯನಗರ ಆಡಳಿತದ ಅವಧಿಯಲ್ಲಿ ಈ ದೇವಸ್ಥಾನವು ಪ್ರಸಿದ್ಧಿಯಾಯಿತು ಮತ್ತು ಭಕ್ತರ ಹರಕೆಗಳು ಹೆಚ್ಚಾಗಿ ಹರಿದುಬರಲಾರಂಭಿಸಿದವು.
1843ರಿಂದ 1933ರವರೆಗೆ ತಿರುಮಲ ದೇವಸ್ಥಾನದ ಆಡಳಿತವು ಹತೀರಾಮಜಿ ಮಠದ ಮಹಾಂತರ ಕೈಯಲ್ಲಿತ್ತು. 1993ರಲ್ಲಿ ಮದ್ರಾಸ್ ಸರಕಾರವು ಇದನ್ನು ವಶಪಡಿಸಿಕೊಂಡು ಆಡಳಿತವನ್ನು ತಿರುಮಲ-ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಎಂಬ ಸ್ವಾಯತ್ತ ಸಮಿತಿಗೆ ಒಪ್ಪಿಸಿತು. ಆಂಧ್ರಪ್ರದೇಶ ರಾಜ್ಯ ರಚನೆಯಾದ ಬಳಿಕ ಟ್ರಸ್ಟಿಗಳ ಮಂಡಳಿಯೊಂದಿಗೆ ಟಿಟಿಡಿಯನ್ನು ಪುನಾರಚಿಸಲಾಯಿತು. ಆಂಧ್ರ ಸರಕಾರವನ್ನು ಪ್ರತಿನಿಧಿಸುವ ಕಾರ್ಯನಿರ್ವಹಣಾಧಿಕಾರಿಯೊಬ್ಬರನ್ನು ನೇಮಿಸಲಾಯಿತು.
ಮುಖ್ಯ ದೇವಸ್ಥಾನ: ವೆಂಕಟಾದ್ರಿ ಬೆಟ್ಟದಲ್ಲಿ ಬಾಲಾಜಿಯು ಸ್ಥಿತನಾಗಿರುವುದರಿಂದ ಅವನಿಗೆ ವೆಂಕಟೇಶ್ವರ ಎಂಬ ಅಭಿದಾನ. ಬೇರೆ ಧರ್ಮೀಯರಿಗೂ ಗರ್ಭಗುಡಿ ದ್ವಾರದವರೆಗೆ ಪ್ರವೇಶಿಸಲು ಅವಕಾಶವಿರುವ ಕೆಲವೇ ದೇವಸ್ಥಾನಗಳಲ್ಲಿ ಈ ಪ್ರಾಚೀನ ದೇವಸ್ಥಾನವೂ ಒಂದು. ವೆಂಕಟೇಶ್ವರನ ದಯೆಯಿದ್ದರೆ ಮಾತ್ರವೇ ಕಲಿಯುಗದಲ್ಲಿ ಮುಕ್ತಿ ಹೊಂದಬಹುದು ಎಂದು ಪುರಾಣಗಳಲ್ಲಿ, ಆಳ್ವಾರ್ ಗ್ರಂಥಗಳಲ್ಲಿ ವಿವರಿಸಲಾಗಿದೆ.
|