ಮರಾಠ ದೊರೆ ಛತ್ರಪತಿ ಶಿವಾಜಿ ಕುಟುಂಬ ದೇವತೆಯಾಗಿ ಆರಾಧಿಸುತ್ತಿದ್ದ ಮಾತೆ ತುಳಜಾ ಭವಾನಿ ದೇವಾಲಯವು ಮಹಾರಾಷ್ಟ್ರದ ಒಸ್ಮನಾಬಾದ್ ಜಿಲ್ಲೆಯ ತುಳಜಾಪುರದಲ್ಲಿದೆ.
ಶಿವಾಜಿ ಸಂತತಿಯಲ್ಲದೆ ಈ ದೇವಿಯನ್ನು ಮಹಾರಾಷ್ಟ್ರ ಹಾಗೂ ಹೊರಗಿನ ಇತರ ಕುಟುಂಬಗಳು ಆರಾಧಿಸಿಕೊಂಡು ಬಂದಿವೆ. ಮಹಾರಾಷ್ಟ್ರದ ಮೂರುವರೆ ಶಕ್ತಿಪೀಠಗಳು ಮತ್ತು ಭಾರತದ ಐವತ್ತೊಂದು ಶಕ್ತಿಪೀಠಗಳಲ್ಲಿ ತುಳಜಾಭವಾನಿ ಒಂದಾಗಿದೆ.
ಪ್ರಾಚೀನ ಭಾರತದಲ್ಲಿ ನೈಮಿಶ್ಯ ಅರಣ್ಯ ಹಾಗೂ ದಂಡಕಾರಣ್ಯ ಪ್ರಮುಖ ಪರ್ವತಗಳಾಗಿದ್ದವು. ಮಹಾರಾಷ್ಟ್ರದ ಅಂಗವಾಗಿದ್ದ ಮರಾಠಾವಾಡವು ಪ್ರಾಚೀನ ದಂಡಕಾರಣ್ಯದಲ್ಲಿ ನೆಲೆಸಿದೆ. ಇದನ್ನು ಯುಮುನಶಾಲಾ ಪರ್ವತ ಅಲಿಯಾಸ್ ಬಾಲಘಾಟ್ ಎಂದು ಕರೆಯಲಾಗುತ್ತದೆ. ತುಳಜಾಪುರವು ಯಮುನಶಾಲದ ಗುಡ್ಡದಲ್ಲಿ ನೆಲೆಸಿದೆ. ಈ ಪ್ರದೇಶದಲ್ಲಿ ತುಳಜಾಭವಾನಿಯ ಸಾಲಿಗ್ರಾಮದ ಸ್ವಯಂಬು ಮೂರ್ತಿ ಇದೆ.
ಇತರೆ ದೇವಾಲಯಗಳಿಗೆ ಹೋಲಿಸಿದರೆ ತುಳಜಾಭವಾನಿ ಮೂರ್ತಿಯ ಸ್ಥಾಪನೆ ಸ್ಥಿರವಲ್ಲ ಬದಲಿಗೆ ಚರ. ಇತರ ದೇವಾಲಯಗಳಲ್ಲಿ ದೇವರ ಮೂರ್ತಿಯನ್ನು ಶಾಶ್ವತವಾಗಿ ಸ್ಥಿರಪಡಿಸಿದ್ದರೆ, ಇಲ್ಲಿಯ ಮೂರ್ತಿಯನ್ನು ಅತ್ತಿತ್ತ ಚಲಿಸಬಹುದಾಗಿದೆ. ಶ್ರೀಯಂತ್ರದಲ್ಲಿ ಆದಿ ಶಂಕರಾಚಾರ್ಯರು ಈ ಮೂರ್ತಿಯನ್ನು ಸ್ಥಾಪಿಸಿದರು ಎಂಬುದಾಗಿ ಚರಿತ್ರೆ ಹೇಳುತ್ತದೆ.
ವರ್ಷದಲ್ಲಿ ಈ ಮೂರ್ತಿಯನ್ನು ಮೂರುಬಾರಿ ಪ್ರದಕ್ಷಿಣೆಗಾಗಿ ಹೊರತೆಗೆಯಲಾಗುತ್ತದೆ. ಶ್ರೀಯಂತ್ರ, ಮಹಾದೇವ ಮತ್ತು ಖಂಡೇರಾವ್ ಜತೆಗೆ ಪ್ರದಕ್ಷಿಣೆ ಮಾಡಲಾಗುತ್ತದೆ.
ಹೇಮದಪಂತಿ ವಾಸ್ತುಶೈಲಿಯಲ್ಲಿರುವ ತುಳಜಾ ಭವಾನಿ ದೇವಾಲಯದ ಪ್ರವೇಶ ಭಾಗದಲ್ಲಿ ಎರಡು ಮಹಾದ್ವಾರಗಳಿವೆ. ದೇವಾಲಯದ ಒಳಗೆ ಪ್ರವೇಶಿಸುತ್ತಿರುವಂತೆಯೇ 108 ತೀರ್ಥಗಳ ಕಲ್ಲೋಲ ತೀರ್ಥ ಕಣ್ಣಿಗೆ ಬೀಳುತ್ತದೆ. ಬಳಿಕ ಕೆಲವು ಮೆಟ್ಟಿಲುಗಳನ್ನು ಕೆಳಗಿಳಿದ ಬಳಿಕ ನಾವು ಗೋಮುಖ ತೀರ್ಥದ ಬಳಿ ಬರುತ್ತೇವೆ. ಇಲ್ಲಿ ನಿರಂತರ ನೀರು ಹರಿಯುತ್ತಿರುತ್ತದೆ. ಗೋಮುಖದಿಂದ ಮುಂದುಗಡೆ ಸಿದ್ಧಿವಿನಾಯಕ ಆಲಯವಿದೆ.
|