ಕನ್ನಡಿಗರ ಕಣ್ಮಣಿಯಾದ ನಮ್ಮ ಪೋರ್ಟಲ್‌ನ ಧಾರ್ಮಿಕ ಯಾತ್ರೆಯ ಅಂಕಣದಲ್ಲಿ ನಿಮಗಿಂದು ಜಗತ್ತಿನಲ್ಲೇ ಪ್ರಖ್ಯಾತಿ ಪಡೆದ ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿರುವ ತಿರುವನಂತಪುರಂ ಜಿಲ್ಲೆಯ ಭಗವತಿ ಮಂದಿರಕ್ಕೆ ಕರೆದೊಯ್ಯುತ್ತಿದ್ದೇವೆ.
ಅಟ್ಟುಕಲ್ ಭಗವತಿ ಮಂದಿರ ಮಹಿಳೆಯರ ಶಬರಿಮಲೆ ಎಂದು ಖ್ಯಾತಿ ಪಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಭೇಟಿ ನೀಡುವ ಏಕೈಕ ಮಂದಿರವಾಗಿದ್ದು, ಇದೇ ಕಾರಣಕ್ಕೆ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲೂ ಈ ದೇವಸ್ಥಾನದ ಹೆಸರು ಸೇರ್ಪಡೆಯಾಗಿದೆ.
ತಿರುವನಂತಪುರಂನ ಎಂ.ಜಿ. ರಸ್ತೆಯಿಂದ ಕೇವಲ ಎರಡು ಕಿ.ಮೀ. ದೂರದಲ್ಲಿರುವ ಭಗವತಿ ಮಂದಿರ ತುಂಬಾ ಪುರಾತನವಾದದ್ದು. ಈ ಸ್ಥಳದಲ್ಲಿ ದೇವಿಗೆ ಕಿರೀಟವನ್ನು ತೊಡಿಸುವುದರಿಂದ ಮುಡಿಪ್ಪುರ ಎಂದು ಕರೆಯುತ್ತಾರೆ. ಇತ್ತೀಚೆಗೆ ಮಂದಿರವನ್ನು ನವೀಕರಿಸಲಾಗಿದ್ದು ಬೃಹತ್ ಮಂದಿರ ನಿರ್ಮಾಣ ಮಾಡಲಾಗಿದೆ. ಪೊಂಗಾಲ ಹಬ್ಬದಲ್ಲಿ ಅತಿ ಹೆಚ್ಚು ಮಹಿಳೆಯರು ಸೇರುವ ಜಗತ್ತಿನ ಏಕೈಕ ಸ್ಥಳವೆಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ.
ಅಟ್ಟುಕಲ್ ಭಗವತಿ ಕನ್ನಿಕೆಯ ಅವತಾರವೆಂದು ಭಾವಿಸುತ್ತಾರೆ. ತಮಿಳಿನ ಪುರಾಣ ಪ್ರಸಿದ್ದ ಶಿಲಾಪಠಿಕರಮ್‌ನ ಪ್ರಮುಖ ನಾಯಕಿ ಎಂದು ಉಲ್ಲೇಖಿಸಲಾಗಿದೆ. ಮಧುರೈಯನ್ನು ಹಾಳುಗೆಡವಿದ ನಂತರ ಕನ್ನಿಕೆ ಕೇರಳವನ್ನು ಪ್ರವೇಶಿಸಿದಳು.ಮುಂದೆ ಸಾಗುವಾಗ ಅಟ್ಟುಕಲ್‌ನಲ್ಲಿ ಕೆಲಕಾಲ ವಿಶ್ರಾಂತಿ ಪಡೆದಿದ್ದಳು ಎಂದು ಪ್ರತೀತಿ ಇದೆ. ಪೊಂಗಾಲ ಹಬ್ಬವನ್ನು ನೇರವೇರಿಸುವುದರಿಂದ ಕನ್ನಿಕೆ ಪ್ರಸನ್ನಳಾಗಿ ಬೇಡಿದ ವರವನ್ನು ನೀಡುತ್ತಾಳೆ ಎನ್ನುವ ನಂಬಿಕೆ ಮಹಿಳಾ ಭಕ್ತರದ್ದು.
ಅಟ್ಟುಕಲ್ ಭಗವತಿ ಮಂದಿರದಲ್ಲಿ ಪ್ರತಿ ವರ್ಷ ಪೊಂಗಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 22ರಂದು ಬೃಹತ್ ವಿಜೃಂಭಣೆಯಿಂದ ಆಚರಿಸಲಾಯಿತು.
|